ಹಲವು ವರ್ಷಗಳಿಂದ ವಿಳಂಬವಾಗಿದ್ದ ಹುಬ್ಬಳ್ಳಿ–ಅಂಕೋಲಾ ವಿಶೇಷ ರೈಲ್ವೆ ಯೋಜನೆ ಮತ್ತೆ ಚುರುಕು ಪಡೆದುಕೊಂಡಿದೆ. ಯೋಜನೆಗಾಗಿ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಸುಮಾರು 40 ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ಸುಮಾರು 163 ಕಿ.ಮೀ ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ. ವಿದ್ಯುದ್ದೀಕರಣದ ಜೊತೆಗೆ ಡಬಲ್ ಲೈನ್ ನಿರ್ಮಾಣಕ್ಕೂ ಯೋಜನೆಯಲ್ಲಿ ಅವಕಾಶವಿದ್ದು, ಇದರ ಒಟ್ಟು ಅಂದಾಜು ವೆಚ್ಚ ಸುಮಾರು ₹16,435 ಕೋಟಿ ಎಂದು ತಿಳಿಸಲಾಗಿದೆ.
ಯೋಜನೆಯ ಭೂಸ್ವಾಧೀನ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 16, ಯಲ್ಲಾಪುರ ತಾಲೂಕಿನ 24 ಹಾಗೂ ಅಂಕೋಲಾ ತಾಲೂಕಿನ 16 ಗ್ರಾಮಗಳು ಸೇರಿವೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನ ಒಟ್ಟು 40 ಗ್ರಾಮಗಳು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಲಿವೆ.
ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಲ್ವೇರಿ, ರಾಮನಕೊಪ್ಪ, ಕನ್ನಡಗಲ್, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡಗದ್ದೆ, ಕಳಚೆ ಹಾಗೂ ಮಾವಿನಮನೆ ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬಂದಿವೆ.
ಅದೇ ರೀತಿ ಅಂಕೋಲಾ ತಾಲೂಕಿನ ಸುಂಕನಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗರಮಕಿಗದ್ದೆ, ಅದ್ದೂರ, ನಾವಗದ್ದೆ, ಬೋಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ ಗ್ರಾಮಗಳಲ್ಲಿಯೂ ಭೂಸ್ವಾಧೀನ ನಡೆಯಲಿದೆ.
₹483 ಕೋಟಿಯಿಂದ ₹16,435 ಕೋಟಿಗೆ ಏರಿದ ಯೋಜನಾ ವೆಚ್ಚ
ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ 1997-98ರ ಅವಧಿಯಲ್ಲೇ ಅನುಮೋದನೆ ದೊರೆತಿತ್ತು. ಅಂದಿನ ಲೆಕ್ಕಾಚಾರದ ಪ್ರಕಾರ ಯೋಜನೆಗೆ ಸುಮಾರು ₹483 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಹಲವು ವರ್ಷಗಳ ವಿಳಂಬದ ಹಿನ್ನೆಲೆಯಲ್ಲಿ ಯೋಜನಾ ವೆಚ್ಚ ಇದೀಗ ₹16,435 ಕೋಟಿಗೆ ಏರಿಕೆಯಾಗಿದೆ.
ಯೋಜನೆ ಅನುಷ್ಠಾನಕ್ಕೆ ಒಟ್ಟು 2,532 ಎಕರೆ ಭೂಮಿ ಅಗತ್ಯವಿದೆ. ಇದರಲ್ಲಿ 1,466 ಎಕರೆ ಅರಣ್ಯ ಪ್ರದೇಶ, 596 ಎಕರೆ ಖಾಸಗಿ ಜಮೀನು ಹಾಗೂ 470 ಎಕರೆ ಸರ್ಕಾರಿ ಭೂಮಿ ಸೇರಿದೆ.
ರೈಲು ಮಾರ್ಗವು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ಮೂಲಕ ಹಾದುಹೋಗಲಿರುವುದರಿಂದ ಪರಿಸರ ಹಾಗೂ ವನ್ಯಜೀವಿ ಸಂಬಂಧಿತ ಅನುಮತಿಗಳು ಯೋಜನೆಗೆ ಪ್ರಮುಖ ಹಂತವಾಗಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆ ಹಾಗೂ ಕೇಂದ್ರ ಅರಣ್ಯ ಸಚಿವಾಲಯದಿಂದ ಅರಣ್ಯ ಅನುಮತಿ ಪಡೆಯಲು ರೈಲ್ವೆ ಇಲಾಖೆ ಜುಲೈ 10ರಂದು ಅರ್ಜಿ ಸಲ್ಲಿಸಿದೆ.
ಇದೀಗ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಬಂದಿರುವುದರಿಂದ ಯೋಜನೆಯ ಮುಂದಿನ ಪ್ರಕ್ರಿಯೆಗಳು ವೇಗ ಪಡೆಯುವ ನಿರೀಕ್ಷೆ ಇದೆ. ಮತ್ತೊಂದೆಡೆ, ರೈಲು ಮಾರ್ಗ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶದಲ್ಲಿ ಮರಗಿಡಗಳ ತೆರವು ಸೇರಿದಂತೆ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಪರಿಸರಾಸಕ್ತರು ಮತ್ತು ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆ ಮತ್ತೆ ಆರಂಭವಾಗಿದೆ.




