ದಕ್ಷಿಣ ಕನ್ನಡದ ಮೊಗೇರ ಮತ್ತು ಉತ್ತರ ಕನ್ನಡದ ಮೀನುಗಾರ ಮೊಗೇರ ಸಮುದಾಯಗಳು ಬೇರೆ ಬೇರೆ; ಸರ್ಕಾರ ಒತ್ತಡಕ್ಕೆ ಮಣಿದರೆ ಜಿಲ್ಲೆಯಾದ್ಯಂತ ಹೋರಾಟದ ಎಚ್ಚರಿಕೆ.
ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ ಸಮುದಾಯದವರು ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರ ಪಡೆಯಲು ಪ್ರಯತ್ನಿಸುತ್ತಿರುವುದಕ್ಕೆ ಭೀಮಗರ್ಜನೆ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಸರ್ಕಾರ ಅಥವಾ ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದು ಬೆಂಬಲ ನೀಡಿದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, “ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿರುವ ಮೊಗೇರ ಸಮುದಾಯ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೊಗೇರ ಸಮುದಾಯಗಳ ಸಾಮಾಜಿಕ ಹಿನ್ನೆಲೆ ವಿಭಿನ್ನವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.
“ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೊಗೇರ ಸಮುದಾಯವು ಐತಿಹಾಸಿಕವಾಗಿ ಅಸ್ಪೃಶ್ಯತೆ ಹಾಗೂ ಸಾಮಾಜಿಕ ತಾರತಮ್ಯವನ್ನು ಎದುರಿಸಿದೆ. ಆದರೆ ಉತ್ತರ ಕನ್ನಡದ ಮೀನುಗಾರ ಮೊಗೇರ ಸಮುದಾಯಕ್ಕೆ ಅಂತಹ ಹಿನ್ನೆಲೆ ಇಲ್ಲ. ಕೇವಲ ಹೆಸರಿನ ಸಾಮ್ಯತೆಯ ಆಧಾರದಲ್ಲಿ ಒಂದು ಪ್ರದೇಶದ ಸಮುದಾಯವನ್ನು ಮತ್ತೊಂದು ಪ್ರದೇಶದ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಲು ಅವಕಾಶವಿಲ್ಲ. ಸುಳ್ಳು ದಾಖಲೆಗಳ ಮೂಲಕ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯಲು ಪ್ರಯತ್ನಿಸುವುದು ಕಾನೂನುಬಾಹಿರ. ಇಂತಹ ಪ್ರಯತ್ನಗಳು ಮೂಲ ದಲಿತ ಸಮುದಾಯಗಳ ಸಂವಿಧಾನಬದ್ಧ ಹಕ್ಕು ಮತ್ತು ಮೀಸಲಾತಿಗೆ ಧಕ್ಕೆ ತರುವುದಾಗಿದೆ” ಎಂದು ಆರೋಪಿಸಿದ್ದಾರೆ.
“ದಲಿತ ಸಂಘರ್ಷ ಸಮಿತಿ (DSS) ದಲಿತರ ಹಕ್ಕುಗಳಿಗಾಗಿ ಹಾಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಸಂಘಟನೆಯಾಗಿದೆ. ವೈಯಕ್ತಿಕ ಹಠ ಅಥವಾ ರಾಜಕೀಯ ಲಾಭಕ್ಕಾಗಿ ಸಂಘಟನೆಯ ಹೆಸರು ಮತ್ತು ನಾಯಕತ್ವವನ್ನು ಬಳಸಿಕೊಂಡು ಮೂಲ ದಲಿತರಿಗೆ ಅನ್ಯಾಯವಾಗುವಂತಹ ಕೆಲಸಗಳಿಗೆ ಮುಂದಾಗಬಾರದು. ಇಂತಹ ಬೆಳವಣಿಗೆಗಳಿಂದ DSS ಸಂಘಟನೆಯ ಹೆಸರಿಗೆ ಕಳಂಕ ಬರಲು ಬಿಡುವುದಿಲ್ಲ” ಎಂದು ಅರ್ಜುನ್ ಮಿಂಟಿ ತಿಳಿಸಿದ್ದಾರೆ.
“ಯಾವುದೇ ಸಚಿವರು, ಶಾಸಕರು ಅಥವಾ ಜನಪ್ರತಿನಿಧಿಗಳು ರಾಜಕೀಯ ಒತ್ತಡ ಅಥವಾ ಮತಬ್ಯಾಂಕ್ ಉದ್ದೇಶದಿಂದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ವಿಚಾರಕ್ಕೆ ಬೆಂಬಲ ಸೂಚಿಸಿದರೆ ಮೂಲ ದಲಿತ ಸಮುದಾಯಗಳ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಸರ್ಕಾರ ಇಂತಹ ನಿರ್ಧಾರಕ್ಕೆ ಮುಂದಾದರೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೂಲ ದಲಿತ ಸಮುದಾಯಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಯಾರ ಹಕ್ಕನ್ನೂ ಕಸಿದುಕೊಳ್ಳುವ ಉದ್ದೇಶ ಸಂಘಟನೆಗಿಲ್ಲ. ಆದರೆ ಮೂಲ ದಲಿತರ ಸಂವಿಧಾನಬದ್ಧ ಹಕ್ಕು ಮತ್ತು ಮೀಸಲಾತಿಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ. ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿಯೇ ಈ ವಿಚಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಭೀಮಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ತಿಳಿಸಿದ್ದಾರೆ.




