ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಹೋಮ್ ಸ್ಟೇ, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆದಿದೆ. ಎಸ್.ಪಿ. ಜಾಹ್ನವಿ, ತಹಶೀಲ್ದಾರ್ ಶೃತಿ, ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಮಾ) ಮತ್ತು ಪ್ರವಾಸೋದ್ಯಮ ಇಲಾಖೆಗಳ ನೇತೃತ್ವದಲ್ಲಿ ಜಂಟಿ ದಾಳಿ ಕೈಗೊಳ್ಳಲಾಯಿತು.
ಹೊಸಪೇಟೆ ತಾಲೂಕಿನ ಕಮಲಾಪುರ, ಹಂಪಿ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಹೋಮ್ ಸ್ಟೇ, ರೆಸ್ಟೋರೆಂಟ್ ಮತ್ತು ರೆಸಾರ್ಟ್‌ಗಳಿವೆ. ಅವೆಲ್ಲವೂ ಹತ್ತಾರು ವರ್ಷಗಳಿಂದ ಅಕ್ರಮವಾಗಿಯೇ ನಡೆಯುತ್ತಿವೆ. ಸಂಬಂಧಪಟ್ಟ ಇಲಾಖೆಗಳ ನಿರಂತರ ಎಚ್ಚರಿಕೆಯ ನಡುವೆಯೂ ಮಾಲೀಕರು ಯಾವುದೇ ಆತಂಕವಿಲ್ಲದೆ ಪರವಾನಗಿ ಪಡೆಯದೆ ಉದ್ಯಮ ನಡೆಸುತ್ತಿದ್ದಾರೆ.
ಇದನ್ನೂ ಓದಿ> ಬಾಗಲಕೋಟೆ | ಬೇಸಿಗೆಯ ಬೇಗೆಯ ನಿರಾಳವಾಗಿಸಿದ ಕೃಷ್ಣಾ
ಜಂಟಿ ದಾಳಿಯ ನಂತರ ಮಾತನಾಡಿದ ಎಸ್.ಪಿ. ಜಾಹ್ನವಿ ಅವರು, “ಪರವಾನಗಿ ಪಡೆಯದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮವಾಗಿ ಹೋಮ್ ಸ್ಟೇ ಮತ್ತು ರೆಸ್ಟೋರೆಂಟ್ ನಡೆಸುತ್ತಿರುವವರು ಕೂಡಲೇ ಪರವಾನಗಿ ಪಡೆಯದಿದ್ದರೆ ಅಂತಹ ರೆಸಾರ್ಟ್‌ಗಳು ಮತ್ತು ಹೋಮ್ ಸ್ಟೇಗಳ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಹಂಪಿಯಲ್ಲಿ ಹೋಮ್ ಸ್ಟೇ, ರೆಸಾರ್ಟ್ ಹಾಗೂ ರೆಸ್ಟೋರೆಂಟ್‌ಗಳು ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಕಾರದ ನಿಯಮಗಳ ವಿರುದ್ಧವಾಗಿ ನಡೆಯುತ್ತಿವೆ ಎಂಬ ಆರೋಪಗಳು ಹಲವು ವರ್ಷಗಳಿಂದಲೂ ಕೇಳಿಬರುತ್ತಿವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಮಾ) ಮತ್ತು ಹಂಪಿ ಗ್ರಾಮ ಪಂಚಾಯತಿ ಈವರೆಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿರಲಿಲ್ಲ. ಇನ್ನಾದರೂ ಹೋಮ್ ಸ್ಟೇ ಮಾಲೀಕರು ಎಚ್ಚೆತ್ತು ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಗಳ ನಿಯಮಾವಳಿಗಳನ್ನು ಪಾಲಿಸುತ್ತಾರೆಯೇ ಎಂದು ಕಾಯ್ದು ನೋಡಬೇಕಿದೆ.




