ವಿಜಯನಗ ಜಿಲ್ಲೆ ಕೂಡ್ಲಿಗಿಯ ಸಂಡೂರು ರಸ್ತೆಯಲ್ಲಿರುವ ಯಶಸ್–ಶ್ರೇಯಾ ಪೆಟ್ರೋಲ್ ಬಂಕ್‌ನಲ್ಲಿ ಕಳೆದ ಎರಡು ತಿಂಗಳಿಂದ ಸಿಎನ್‌ಜಿ ಘಟಕ ಸ್ಥಗಿತಗೊಂಡಿದೆ. ತಕ್ಷಣವೇ ಪುನರ್ ಆರಂಭಿಸಿ, ಇಂಧನ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್‌ನ ತಾಲೂಕು ಘಟಕದ ಪದಾಧಿಕಾರಿಗಳು ಗ್ರೇಡ್–2 ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕು ಸಮಿತಿ ಅಧ್ಯಕ್ಷ ಮಂಜು ಮಯೂರ ಮಾತನಾಡಿ, “ಸಂಡೂರು ರಸ್ತೆಯಲ್ಲಿರುವ ಸಿಎನ್‌ಜಿ ಘಟಕವನ್ನೇ ನಂಬಿಕೊಂಡು ಕೂಡ್ಲಿಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಯುವಕರು ಸಿಎನ್‌ಜಿ ಆಟೋ ಹಾಗೂ ಕಾರುಗಳನ್ನು ಖರೀದಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಸಿಎನ್‌ಜಿ ಪೂರೈಕೆ ಸ್ಥಗಿತಗೊಂಡಿರುವುದರಿಂದ ಚಾಲಕರು ಅನಿವಾರ್ಯವಾಗಿ ಹೆಚ್ಚಿನ ದರದ ಪರ್ಯಾಯ ಇಂಧನ ಬಳಸುವಂತಾಗಿದೆ” ಎಂದರು.
“ಸಿಎನ್‌ಜಿ ಸಿಗದ ಕಾರಣ ದಿನನಿತ್ಯದ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಆಟೋ ಚಾಲಕರ ಆದಾಯ ಗಣನೀಯವಾಗಿ ಕುಸಿದಿದೆ. ಕುಟುಂಬ ನಿರ್ವಹಣೆ, ವಾಹನದ ಸಾಲದ ಕಂತು ಹಾಗೂ ಇತರ ಖರ್ಚುಗಳನ್ನು ಭರಿಸುವುದು ಕಷ್ಟಕರವಾಗಿದ್ದು, ಚಾಲಕರು ಮತ್ತು ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರೂ ಸಹ ಇಂಧನದ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಈ ಬಂಕ್‌ಗೆ ಭೇಟಿ ನೀಡಿ ಸಿಎನ್‌ಜಿ ಘಟಕ ಸ್ಥಗಿತಗೊಂಡಿರುವ ಕಾರಣ ಪರಿಶೀಲಿಸಬೇಕು. ಸಮಸ್ಯೆ ಬಗೆಹರಿಸಿ ಕೂಡಲೇ ಸಿಎನ್‌ಜಿ ಪೂರೈಕೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಟೋ ಚಾಲಕರು ತಮ್ಮ ಕುಟುಂಬ ಸಮೇತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಂಜು ಮಯೂರ ಎಚ್ಚರಿಕೆ ನೀಡಿದರು.
ಆಟೋ ಚಾಲಕರ ಸಂಘದ ಕಾರ್ಮಿಕ ಮುಖಂಡ ಹಾಗೂ ಕಾನೂನು ಸಲಹೆಗಾರ ಸಿ. ವಿರೂಪಾಕ್ಷಪ್ಪ ಮಾತನಾಡಿ, “ಆಟೋ ಚಾಲಕರ ಬದುಕಿಗೆ ಸಿಎನ್‌ಜಿ ಪೂರೈಕೆ ಅತ್ಯಂತ ಅಗತ್ಯವಾಗಿದೆ. ಸಂಬಂಧಪಟ್ಟವರು ವಿಳಂಬ ಮಾಡದೆ ಆದಷ್ಟು ಬೇಗ ಇಂಧನ ಪೂರೈಕೆ ಪುನರ್ ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ಕುಟುಂಬ ಸಮೇತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಯಶಸ್–ಶ್ರೇಯಾ ಬಂಕ್ ಮಾಲೀಕ ಕೊಟ್ರಯ್ಯ, ಸಿಎನ್‌ಜಿ ಸೇಲ್ಸ್ ಆಫೀಸರ್ ದೀಪಕ್ ಸಿಂಗ್, ನಲ್ಲಮುತ್ತಿ ದುರುಗೇಶ್, ಡಿ. ಚೌಡಪ್ಪ, ರಾಮು, ನಾಗರಾಜ, ಜಿ. ಗೋವಿಂದಪ್ಪ, ಬಣಕಾರ್ ನಾಗರಾಜ, ಇಮ್ರಾನ್, ಇಬ್ಬದುಲ್, ಕೆ. ಅಬ್ದುಲ್ಲ, ಬಿ. ಮುಸಾ, ಟೈಗರ್ ದುರ್ಗಪ್ಪ, ಜಿಂಕಲ್ ನಾಗೇಶ್, ಪರಶುರಾಮ, ಮಲ್ಲಿಕಾರ್ಜುನ, ಮಂಜುನಾಥ, ಕೋಟೆಪ್ಪ, ಅಂಜಿನಪ್ಪ ಸೇರಿದಂತೆ ಹಲವರು ಇದ್ದರು.




