ಔರಾದ್ (ಬಿ) ಪೊಲೀಸ್ ಠಾಣೆ ವ್ಯಾಪ್ತಿಯ ಖಂಡಿಕೇರಿ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು ₹30.21 ಲಕ್ಷ ಮೌಲ್ಯದ 100 ಗಾಂಜಾ ಗಿಡಗಳನ್ನು ಔರಾದ್ ಠಾಣೆಯ ಪೊಲೀಸರು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಔರಾದ್ ಪೊಲೀಸ್ ಠಾಣೆ ಪಿಎಸ್‌ಐ ವಸೀಮ್ ಪಟೇಲ್ ನೇತ್ರತ್ವದಲ್ಲಿ ಆ.18ರಂದು ಖಚಿತ ಮಾಹಿತಿ ಮೇರೆಗೆ ತಾಲೂಕಿನ ಖಂಡಿಕೇರಿ ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ಮೇಲೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಬೆಳೆದಿದ್ದ 100 ಹಸಿ ಗಾಂಜಾ ಗಿಡಗಳು ವಶಕ್ಕೆ ಪಡೆದಿದ್ದಾರೆ. ಒಟ್ಟು 60 ಕೆಜಿ 430 ಗ್ರಾಂ ತೂಕವಿರುವ ಗಾಂಜಾ ಗಿಡಗಳ ಮೌಲ್ಯ ₹30.21 ಲಕ್ಷ ಇರುವುದು ಗೊತ್ತಾಗಿದೆ.
ಔರಾದ್ ಠಾಣೆಯ ಅಪರಾಧ ವಿಭಾಗ ಪಿಎಸ್‌ಐ ರೇಣುಕಾ ಸೇರಿದಂತೆ ಠಾಣೆಯ ಸಿಬ್ಬಂದಿಗಳಾದ ಹರೀಶಕುಮಾರ, ಜ್ಞಾನೇಶ್ವರ, ಅರುಣ, ಸಂಜುಕುಮಾರ, ಯೋಗೇಶ, ಗೌತಮ, ಶ್ರೀಕಾಂತರೆಡ್ಡಿ ಸೇರಿದಂತೆ ಇತರೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಸಂಬಂಧ ಔರಾದ್ (ಬಿ) ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕೃಷ್ಣಮೃಗ ಬೇಟೆ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಬೆಳೆ, ಸಾಗಾಟ ಹಾಗೂ ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.




