ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಯ ಲಾಭ ತಲುಪಿಸಬೇಕು. ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಲು ವೃಥಾ ವಿಳಂಬ ಮಾಡಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯ, ಕರ್ನಾಟಕ ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಸಮುದಾಯದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
“ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ವಿವಿಧ ಯೋಜನೆಗಳಡಿ ಸರ್ಕಾರ ಒದಗಿಸುವ ಎಲ್ಲಾ ಸೌಲಭ್ಯವನ್ನು ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ರಿಷಿ ಆನಂದ ಮಾತನಾಡಿ, “ಅರ್ಹರಿಗೆ ಬ್ಯಾಂಕಿನ ಮಾರ್ಗಸೂಚಿಯಂತೆ ಸಾಲ ಸೌಲಭ್ಯ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬ್ಯಾಂಕುಗಳು ವೃಥಾ ವಿಳಂಬ ಮಾಡಬಾರದು” ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀಡುವುದು, ಸಮುದಾಯ ಭವನ ನಿರ್ಮಾಣ, ಬೀದಿ ದೀಪ, ಸ್ಮಶಾನ ಭೂಮಿ, ಈ ಸಮುದಾಯ ವಾಸಿಸುವ ಕಾಲೊನಿಯಲ್ಲಿ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸುವಂತೆ ಸಮಿತಿ ಸದಸ್ಯರು ಸಭೆಗೆ ಕೋರಿದರು.
ಕೋರಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ “ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಸದಸ್ಯರು ಈ ಸಭೆಯಲ್ಲಿ ಸಲ್ಲಿಸಿದ ಕುಂದುಕೊರತೆಗಳಿಗೆ ಪ್ರಾಧಾನ್ಯತೆ ನೀಡಿ ಇತ್ಯರ್ಥ ಪಡಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ಕಾಮಣ್ಣ ದೇವಪ್ಪ ದಶವಂತ, ಬಾಬು ಭೀಮಪ್ಪ ಭಜಂತ್ರಿ, ಲಕ್ಷ್ಮಣನಾಗಪ್ಪ ಭಜಂತ್ರಿ ಇದ್ದರು.




