ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವುದು ಹಾಗೂ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಯೋಜನೆಯ ಮುಂದಿನ ಹಂತಗಳನ್ನು ಪೂರ್ಣಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳ ರೈತ ಹಾಗೂ ಹೋರಾಟಗಾರರ ಮಹತ್ವದ ಸಭೆ ಬುಧವಾರ ಆಲಮಟ್ಟಿಯಲ್ಲಿ ನಡೆಯಿತು. ಸಭೆಯಲ್ಲಿ ಕೃಷ್ಣಾ ಕೊಳ್ಳದ ನೀರಿನ ಹಕ್ಕು, ಆಲಮಟ್ಟಿ 3ನೇ ಹಂತದ ಯೋಜನೆ ಹಾಗೂ ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, “ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಆಲಮಟ್ಟಿ ಯೋಜನೆ ಇಂದಿಗೂ ಸಂಪೂರ್ಣಗೊಂಡಿಲ್ಲ. ಇದರಿಂದ ಕೃಷ್ಣಾ ಕೊಳ್ಳದ ರೈತರು ಮತ್ತೊಮ್ಮೆ ತೀವ್ರ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
“ಆಲಮಟ್ಟಿ ಯೋಜನೆಯ ಪೂರ್ಣತೆಗೆ ಒತ್ತಡ ಹೇರುವ ಉದ್ದೇಶದಿಂದ ವಿಜಯಪುರ ಹಾಗೂ ಬಾಗಲಕೋಟೆ ಸೇರಿದಂತೆ ಅವಳಿ ಜಿಲ್ಲೆಗಳ ಹೋರಾಟಗಾರರ ಸಭೆ ಕರೆಯಲಾಗಿದೆ. ಮುಂದಿನ ಹಂತದಲ್ಲಿ ಹೋರಾಟವನ್ನು ಯಾವ ರೀತಿಯಲ್ಲಿ ಸಂಘಟಿಸಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ರೈತರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ” ಎಂದರು.
ಜಲ ತಜ್ಞ ರಾಜೇಂದ್ರ ಪೊದ್ದಾರ ಹಾಗೂ ನಿವೃತ್ತ ನ್ಯಾಯಮೂರ್ತಿ ಬಿ.ಸಿ. ಬಿರಾದಾರ ಮಾತನಾಡಿ, “ಆಲಮಟ್ಟಿ ಯೋಜನೆಗೆ ಸಂಬಂಧಿಸಿದಂತೆ ಒಂದರ ಮೇಲೊಂದರಂತೆ ಆಯೋಗಗಳನ್ನು ರಚಿಸಲಾಗುತ್ತಿದೆ. ಕಾನೂನಾತ್ಮಕ ಅಡೆತಡೆಗಳ ನೆಪದಲ್ಲಿ ಆಲಮಟ್ಟಿ 3ನೇ ಹಂತದ ಯೋಜನೆಯನ್ನು ವಿಳಂಬಗೊಳಿಸುವುದು ಸರಿಯಲ್ಲ” ಎಂದು ಹೇಳಿದರು.
“ಕೃಷ್ಣಾ ಕೊಳ್ಳದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು. ರೈತರು ಕೂಡ ತಮ್ಮ ನೀರಿನ ಹಕ್ಕಿನ ಬಗ್ಗೆ ಜಾಗೃತರಾಗಿ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು” ಎಂದು ಅವರು ಕರೆ ನೀಡಿದರು.
ಇದನ್ನೂ ಓದಿದ್ದೀರಾ? ರಾಯಚೂರು | ದಲಿತರ ಸರಣಿ ಮೂರು ಕೊಲೆಗಳ ಸಿಐಡಿ ತನಿಖೆಗೆ ಆಗ್ರಹ: ಗೃಹ ಸಚಿವರಿಗೆ ಮನವಿ
ರೈತ ಮುಖಂಡ ಎಸ್.ವಿ. ಪಾಟೀಲ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿನ ವಿಚಾರಣೆಯ ನೆಪದಲ್ಲಿ ಅನಗತ್ಯ ಕಾಲಹರಣ ಮಾಡುತ್ತಿವೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಭೋಗೇಶ ಸೋಲಾಪುರ, ಲಲಿತಾ ಬಿಜ್ಜರ್ಗಿ, ಶ್ರೀನಾಥ್ ಪೂಜಾರಿ, ನೀಲಂಬಿಕಾ ಬಿರಾದಾರ, ಭರತಕುಮಾರ ಎಚ್‌ಟಿಎಂ ಪಡಶೆಟ್ಟಿ, ಸುರೇಶ್ ಬಿಜಾಪುರ ಹಾಗೂ ಹಲವು ರೈತ ಮುಖಂಡರು ಇದ್ದರು.




