ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ಹಾಗೂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಹೊಸ ವಿಭಾಗ ಕಚೇರಿ ಹಾಗೂ ಮೂರು ಉಪವಿಭಾಗ ಕಚೇರಿಗಳನ್ನು ಆರಂಭಿಸಲು ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ತಿಕೋಟಾದಲ್ಲಿ ಯೋಜನೆಗೆ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸುವಂತೆ ಈ ಹಿಂದೆಯೇ ಜಲಸಂಪನ್ಮೂಲ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಮನವಿಗೆ ಸ್ಪಂದಿಸಿ ಅಗತ್ಯ ಆದೇಶ ಹೊರಡಿಸಿರುವುದು ಸಂತೋಷದಾಯಕವಾಗಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
“ಹೊಸ ಆದೇಶದಂತೆ ತಿಕೋಟಾದಲ್ಲಿ ಒಂದು ವಿಭಾಗ ಕಚೇರಿ ಸ್ಥಾಪನೆಯಾಗಲಿದ್ದು, ಅದರ ವ್ಯಾಪ್ತಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಅಧೀನದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಉಪವಿಭಾಗ–1, ಉಪವಿಭಾಗ–2 ಹಾಗೂ ಉಪವಿಭಾಗ–3 ಕಾರ್ಯನಿರ್ವಹಿಸಲಿವೆ” ಎಂದರು..
ಈ ಸುದ್ದಿ ಓದಿದ್ದೀರಾ? ಸಿಂದಗಿ | ರಾಷ್ಟ್ರಧ್ವಜ ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವದ ಪ್ರತೀಕ: ಎ ಆರ್ ಹೆಗ್ಗಣದೊಡ್ಡಿ
ಇದೇ ವೇಳೆ, “ಹೊಸ ಕಚೇರಿಗಳ ಕಟ್ಟಡ ನಿರ್ಮಾಣ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒಟ್ಟು ₹2.50 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಜತೆಗೆ, ಕಚೇರಿಗಳ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಜಲಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ” ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
“ಯೋಜನೆಗೆ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆ ರೂಪುಗೊಳ್ಳುವುದರಿಂದ ಕಾಮಗಾರಿಗಳ ಅನುಷ್ಠಾನಕ್ಕೆ ವೇಗ ಸಿಗಲಿದ್ದು, ನೀರಾವರಿ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





