ರಾಜ್ಯಾದ್ಯಂತ ಕೊಂಚ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಭಾರಿ ಚುರುಕುಗೊಂಡಿದೆ. ಜುಲೈ 27ರವರೆಗೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಬಲವಾದ ಮಾರುತಗಳ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಕರ್ನಾಟಕದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜುಲೈ 27ರವರೆಗೆ ಹೆಚ್ಚಿನ ಪ್ರಮಾಣದ ಭಾರಿ ಮಳೆಯಾಗಲಿದೆ.
ಇದನ್ನೂ ಓದಿ: ಮಳೆ ಇನ್ನಷ್ಟು ಕಡಿಮೆ: ಮುಂಗಾರು ಮುನ್ಸೂಚನೆ ಪರಿಷ್ಕರಿಸಿದ ಹವಾಮಾನ ಇಲಾಖೆ
ಇನ್ನು ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಕಲಬುರಗಿ, ಯಾದಗಿರಿ ಸೇರಿದಂತೆ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ
ಕರಾವಳಿ ತೀರದಲ್ಲಿ ಕಡಲು ಕೊರೆತ ಮತ್ತು ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಜುಲೈ 27ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಲೆನಾಡು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಮತ್ತು ಭೂಕುಸಿತ ಉಂಟಾಗುವ ಸಾಧ್ಯತೆ ಇರುವ ಕಾರಣ ಸಾರ್ವಜನಿಕರು ಹಾಗೂ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.





