ಕಬ್ಬಿನ ದರ ನಿಗದಿಯಲ್ಲಿ ರೈತರಿಗೆ ಅನ್ಯಾಯವಾಗದಂತೆ ರಾಜ್ಯದ ಎಲ್ಲ ಭಾಗಗಳಿಗೂ ಏಕರೂಪದ ದರ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ ಒಟ್ಟು ₹3,600 ಪಾವತಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ರೈತ ಸಂಘಟನೆಗಳು ಸಿದ್ಧತೆ ನಡೆಸಿವೆ.
ಈ ಕುರಿತು ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಾಳೆ ಮಹತ್ವದ ಸಭೆ ಆಯೋಜಿಸಲಾಗಿದೆ. ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಂಗಾಮಿನಲ್ಲಿ ಈ ಭಾಗದ ಕಬ್ಬು ಬೆಳೆಗಾರರಿಗೆ ಏಕರೂಪದ ದರ ನೀಡದೆ ಅನ್ಯಾಯ ಮಾಡಲಾಗಿದೆ. ಈ ಬಾರಿಯೂ ಅದೇ ರೀತಿಯ ತಾರತಮ್ಯ ಪುನರಾವರ್ತನೆಯಾಗಬಾರದು. ರಿಕವರಿ ಪ್ರಮಾಣ ಅಥವಾ ಸಕ್ಕರೆಯ ಬೆಲೆ ₹44 ಎಂಬ ನೆಪಗಳನ್ನು ಮುಂದಿಟ್ಟುಕೊಂಡು ರೈತರಿಗೆ ಕಡಿಮೆ ದರ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಪ್ರಸಕ್ತ ಹಂಗಾಮಿನಲ್ಲಿ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್‌ಗೆ ₹3,500 ಹಾಗೂ ಎರಡನೇ ಕಂತಿನಲ್ಲಿ ₹100 ಪಾವತಿಸಬೇಕು. ಈ ಮೂಲಕ ಒಟ್ಟು ₹3,600 ದರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಭಾಗದಲ್ಲಿ ನಿಗದಿಪಡಿಸಿದ ಮಾದರಿಯಲ್ಲಿಯೇ ಕೃಷ್ಣಾ ಹಾಗೂ ಘಟಪ್ರಭಾ ನದಿ ತೀರದ ಕಬ್ಬಿಗೂ ಪ್ರತಿ ಟನ್‌ಗೆ ಏಕರೂಪವಾಗಿ ₹3,600 ದರ ನಿಗದಿಪಡಿಸಬೇಕು. ಇಳುವರಿ ನೆಪದಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.ರಿಕವರಿ ವಿಚಾರದಲ್ಲಿ ದರ ವ್ಯತ್ಯಾಸ ಕಂಡುಬಂದರೆ ಅದನ್ನು ಸಹಿಸುವುದಿಲ್ಲ. ಅಗತ್ಯವಿದ್ದಲ್ಲಿ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ತಜ್ಞರಿಂದಲೇ ರಿಕವರಿ ಪರೀಕ್ಷೆ ನಡೆಸುವಂತೆ ಸಂಘಟನೆ ಒತ್ತಾಯಿಸಲಿದೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಕಬ್ಬು ಬೆಳೆಗಾರರು ಸೇರಿದಂತೆ ಸಮಸ್ತ ರೈತರ ಆರ್ಥಿಕ ಹಿತದೃಷ್ಟಿಯಿಂದ ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ರಾಮನಗೌಡ ಪಾಟೀಲ, ದಯಾನಂದ ಕೋಳಿ, ಮಹದೇವ ಬನಸೋಡೆ, ಸಂಗಪ್ಪ ಟಕ್ಕೆ, ಅಭಿಷೇಕ ಹೂಗಾರ ಹಾಗೂ ಮುದುಕಣ್ಣ ಹೊರ್ತಿ ಇದ್ದರು.




