ಹಳ್ಳಿಯ ಜನರನ್ನು ಗುಗ್ಗು ಹಾಗೂ ‘ವಿಲೇಜ್ ಈಡಿಯಟ್ಸ್’ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮೀಣ ಜನರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಎತ್ತಿನ ಬಂಡಿ ಮೇಲೆ ಆಗಮಿಸಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಗೃಹ ಸಚಿವರು ಹಳ್ಳಿಯ ಜನರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿರುವುದನ್ನು ಖಂಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಹೇಳಿಕೆ ನೀಡಿದ ಪ್ರಿಯಾಂಕಾ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಡೀ ಗ್ರಾಮೀಣ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದು, ಕೂಡಲೇ ಗೃಹ ಸಚಿವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಶಂಕರ ವಕೀಲ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗ್ರಾಮೀಣ ಹಿನ್ನೆಲೆಯಿಂದ ಬಂದು ನೀರಾವರಿ ಯೋಜನೆಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅದೇ ರೀತಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲಮನ್ನಾ ಸೇರಿದಂತೆ ರೈತಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂತಹ ನಾಯಕರನ್ನು ಅವಹೇಳನ ಮಾಡುವ ಮೂಲಕ ಗ್ರಾಮೀಣ ಜನರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ದೂರಿದರು.
ಹಿಂದುಳಿದ ಘಟಕದ ಅಧ್ಯಕ್ಷ ಜಂಬುನಾಥ ಯಾದವ್ ಮಾತನಾಡಿ ನಾವು ಹಳ್ಳಿ ಗುಗ್ಗುಗಳು, ಏನಿವಾಗ ಎಂಬ ಘೋಷವಾಕ್ಯದೊಂದಿಗೆ ಗ್ರಾಮೀಣ ಜನರ ಪರವಾಗಿ ಜೆಡಿಎಸ್ ಹೋರಾಟ ಮುಂದುವರಿಸಲಿದೆ. ರಾಯಚೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆದಿದ್ದರೂ ಸಂಭಂದಪಟ್ಟ ಸಚಿವರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸದಿರುವುದು ವಿಷಾದನೀಯ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರ ಕೂಡಲೇ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತರ ಮೇಲಿನ ಹಲ್ಲೆ ಖಂಡಿಸಿ ನ. 8ರಂದು ‘ತಿಡಿಗೋಳ ಚಲೋ’ ಬೈಕ್ ರ್ಯಾಲಿ
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಂಬೂನಾಥ ಯಾದವ, ಗ್ರಾಮಾಂತರ ಅಧ್ಯಕ್ಷ ನಾಗರಾಜ ಗೌಡ, ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಹಂಪಯ್ಯ ನಾಯಕ, ನರಸಪ್ಪ ಆಶಾಪುರ, ಮುಖಂಡರಾದ ಬಾಬು ದಿನ್ನಿ ,ಪಿ. ರಾಜು, ನರಸಿಂಹಲು, ಅಂಜಿನಯ್ಯ ಯಾದವ, ಸೀಮಾ ನದಾಫ್, ಶಾಲಂ, ಅಮ್ಮದ್ ಹುಸೇನ್, ಸಾಬೀರ್, ಪರ್ವೇಜ್, ಅಲಂಬಾಬು, ಆದಿರಾಜ್, ಪಿ. ನರಸಿಂಹಲು, ವೆಂಕಟಸ್ವಾಮಿ, ಅಮಿತ್ ಸುಂಕಾರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.




