ಸಮಾಜದ ಅಭಿವೃದ್ಧಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಿಜಯಪುರ ರೋಟರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಜೋಶಿ ಹೇಳಿದರು.
ವಿಜಯಪುರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ. ದೇಶದ ಮೂಲಸೌಕರ್ಯ, ಕೈಗಾರಿಕೆ, ಕೃಷಿ, ಸಾರಿಗೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ” ಎಂದು ಹೇಳಿದರು.
ಎಂಜಿನಿಯರ್‌ಗಳು ಕೇವಲ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸೀಮಿತವಾಗದೆ, ಸಮಾಜದ ಅಗತ್ಯಗಳನ್ನು ಅರ್ಥಮಾಡಿಕೊಂಡು ಸುಸ್ಥಿರ ಹಾಗೂ ಜನಪರ ಅಭಿವೃದ್ಧಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬಳಸಬೇಕು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಹೊಸ ವಿಚಾರಗಳನ್ನು ಕಲಿಯುವ ಮೂಲಕ ನಿರಂತರವಾಗಿ ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“ಯುವ ಎಂಜಿನಿಯರ್‌ಗಳು ನವೀನ ಆಲೋಚನೆ, ಪ್ರಾಮಾಣಿಕತೆ, ಸೃಜನಶೀಲತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಎಂಜಿನಿಯರಿಂಗ್ ವೃತ್ತಿಯನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ನೋಡದೆ, ಸಮಾಜಕ್ಕೆ ಕೊಡುಗೆ ನೀಡುವ ಅವಕಾಶವೆಂದು ಪರಿಗಣಿಸಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ಕೆಲಸ ಮಾಡದೇ ಸಂಬಳ; ಶಾಸಕ ಮೇಟಿ ಸೊಸೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪುತ್ರ ಜವಳಿ ಮಾತನಾಡಿ, “ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಕೊಡುಗೆಯನ್ನು ಸ್ಮರಿಸುವ ಹಾಗೂ ಅವರ ಸೇವೆಯನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಗೋಪಾಲ್ ಕುಲಕರ್ಣಿ, ಇಮಾಮ ಹುಲ್ಲೂರ್, ವಾಸುದೇವ ಬೆಂಡಿಗೇರಿ, ಡಾ. ರವೀಂದ್ರ ಬೆಳ್ಳಿ, ಚಂದ್ರಶೇಖರ ಸಿಂಧೂರ, ಕಲ್ಲಪ್ಪ ಮೇತ್ರಿ, ಮಹಾವಿದ್ಯಾಲಯದ ಚೆನ್ನಪ್ಪ ಹುಣಶಾಳ, ಪ್ರದೀಪ ನಾಗನೂರ, ರೇಖಾ ಖಾನಾಪುರ, ಅಕ್ಷತಾ ಕುಷ್ಟಗಿ, ಸುವರ್ಣ ಕಬಾಡೆ, ಪಿ.ಎಸ್. ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.




