ಮೇ 22, 2026ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಅಮಾನತಿನಲ್ಲಿಡುವ ಯಾವುದೇ ಪ್ರಸ್ತಾವನೆಯನ್ನು ತಕ್ಷಣ ತಿರಸ್ಕರಿಸಿ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಾರ್ಮಿಕರಿಗೆ ಪರಿಷ್ಕೃತ ವೇತನ ಪಾವತಿಸಬೇಕು ಎಂದು ಹೊರಗುತ್ತಿಗೆ ಕಾರ್ಮಿಕರು ವಿಜಯಪುರ ಅಪರ ಜಿಲ್ಲಾಧಿಕಾರಿಗೆ ಆಗ್ರಹಿಸಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ವಸತಿ ನಿಲಯ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಜಿಲ್ಲಾಮಟ್ಟದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
2026ರ ಮೇ 22ರಂದು ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಬಂದಿದ್ದು, ಹಲವು ಇಲಾಖೆಗಳಲ್ಲಿ ಈಗಾಗಲೇ ಪರಿಷ್ಕೃತ ವೇತನ ಪಾವತಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅಧಿಸೂಚನೆಯನ್ನು ತಡೆಹಿಡಿಯುವ ಪ್ರಯತ್ನ ಕಾರ್ಮಿಕ ವಿರೋಧಿ ಹಾಗೂ ಕಾನೂನುಬಾಹಿರ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪರಿಷ್ಕೃತ ಕನಿಷ್ಠ ವೇತನವನ್ನು ಎಲ್ಲ ಕ್ಷೇತ್ರಗಳಲ್ಲೂ ತಕ್ಷಣ ಜಾರಿಗೊಳಿಸಿ, ಬಾಕಿ ವೇತನ ಪಾವತಿಸಬೇಕು. ಅನುಷ್ಠಾನಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ವೇತನ ಪಾವತಿಸದ ಗುತ್ತಿಗೆದಾರರು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ,ಕಾಶಿಬಾಯಿ ಜನಗೂಂಡ, ಮಹಾದೇವಿ ಧರ್ಮಶೆಟ್ಟಿ, ಚಾಂದಬಾಷಾ , ಮಲ್ಲಿಕಾರ್ಜುನ ಹಿರೇಮಠ, ಅಖಂಡೇಶ ಬಡಿಗೇರ, ಮಿನಾಕ್ಷಿ ರಾಠೋಡ, ಸಿದ್ದು ಬೆನ್ನೂರ ,ಕಾಂತು ಲಮಾಣಿ, ಜಗದೀಶ್ ಜಗತಾಪ, ಸಿದ್ದು ಮಾದರ, ಸಿ ಎ ಕುಂಬಾರ ಶಿವಮ್ಮ ಬೂದಿಹಾಳ ಇದ್ದರು.




