ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯ ಸಂದೇಶವನ್ನು ಯುವಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ವಿಜಯಪುರ ನಗರದ ಬುರಣಾಪುರದ ಕನಕದಾಸ ನಗರದಲ್ಲಿ ಆಗಸ್ಟ್ 15ರಂದು ಸಂಗೊಳ್ಳಿ ರಾಯಣ್ಣನವರ 228ನೇ ಜನ್ಮದಿನೋತ್ಸವ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿದ್ದು, ಆಯೋಜನಾ ಸಮಿತಿಯ ಪದಾಧಿಕಾರಿಗಳು ವಿವಿಧ ಗಣ್ಯರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ಸಮಿತಿ ಸದಸ್ಯರು ಶಾಲು ಹೊದಿಸಿ ಸನ್ಮಾನಿಸಿ, ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರತಾಪ್ ನಾಗರಗೋಜಿ ಮಾತನಾಡಿ, “ಕಾರ್ಯಕ್ರಮಕ್ಕೆ ನಾಡಿನ ವಿವಿಧ ಜನಪ್ರತಿನಿಧಿಗಳು, ನಿಗಮ-ಮಂಡಳಿ ಪದಾಧಿಕಾರಿಗಳು ಹಾಗೂ ಹಾಲಿ ಮತ್ತು ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
“ಆಗಸ್ಟ್ 15ರಂದು ಸಂಜೆ 3ಕ್ಕೆ ಬುರಣಾಪುರದ ಕನಕದಾಸ ನಗರದ ಬೃಹತ್ ಆವರಣದಲ್ಲಿ ಸಮಾರಂಭ ನಡೆಯಲಿದೆ. ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ್ ಜಿಗಜಿಣಗಿ, ನಾಗಠಾಣ ಶಾಸಕ ವಿಠ್ಠಲ್ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಸುನಿಲ್‌ಗೌಡ ಪಾಟೀಲ ಹಾಗೂ ಮಾಜಿ ಶಾಸಕ ರಾಜು ಆಲಗೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಸಂತೋಷ್ ಪೂಜಾರಿ, ರಾಜಕೀಯ ಮುಖಂಡರಾದ ಅಹಮೀದ್ ಮುಷ್ರಿಫ್, ಉಮೇಶ್ ಕಾರಜೋಳ, ಸಂಜೀವ್ ಐಹೊಳೆ, ಗಣಪತಿ ನಾಗರಗೋಜಿ, ಸುರೇಶ್ ವಾಲಿಕಾರ್, ಈಶ್ವರಪ್ಪ ಶೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಐನಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮು ಹಂಗಿ, ಉಪಾಧ್ಯಕ್ಷ ರಾಜು ಹಳ್ಳಿ ಹಾಗೂ ಮಾಜಿ ಸದಸ್ಯರು, ಗ್ರಾಮದ ಪ್ರಮುಖರು ಉಪಸ್ಥಿತರಿರುವರು.
ಆಡಳಿತಾತ್ಮಕವಾಗಿ ವಾರ್ತಾ ಇಲಾಖೆಯ ಉಪನಿರ್ದೇಶಕ ಅಮರೇಶ್ ದೊಡಮನಿ, ವಿಜಯಪುರ ತಹಶೀಲ್ದಾರ್ ಪ್ರಶಾಂತ್ ಚನಗೊಂಡ ಹಾಗೂ ಐನಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅರ್ಜುನ ದೊಡ್ಡಮನಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಕ್ಕಳಿಂದ ದೇಶಭಕ್ತಿ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಅರಿವು ಮೂಡಿಸುವ ಉದ್ದೇಶದಿಂದ ಸಮಾರಂಭದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಲಿದ್ದು, ಸಂಗೊಳ್ಳಿ ರಾಯಣ್ಣನವರ ವೀರಗಾಥೆಯನ್ನು ಆಧರಿಸಿದ ನಾಟಕ ರೂಪಕವೂ ಪ್ರದರ್ಶನಗೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ತೋಟಗಾರಿಕೆ ವಿವಿಯಲ್ಲಿ ಪೂಜೆ-ಹೋಮ ಆಯೋಜನೆ; ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ!
ಕಮಿಟಿ ಮುಖಂಡ ಗೌಡಪ್ಪ ಬಡಿಗೇರ ಮಾತನಾಡಿ, “ರಾಯಣ್ಣನವರ ಸಾಹಸ, ಶೌರ್ಯ, ನಿಸ್ವಾರ್ಥ ಸೇವೆ ಹಾಗೂ ಮಾತೃಭೂಮಿಯ ಮೇಲಿನ ಅಭಿಮಾನವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಸಮಾರಂಭದ ಪ್ರಮುಖ ಉದ್ದೇಶವಾಗಿದೆ. ಯುವಜನರಲ್ಲಿ ದೇಶಪ್ರೇಮ, ಧೈರ್ಯ ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸುವ ಮೂಲಕ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಲಾಗುವುದು” ಎಂದರು.
ಆಹ್ವಾನ ಸಲ್ಲಿಸುವ ಸಂದರ್ಭದಲ್ಲಿ ಆಯೋಜನಾ ಸಮಿತಿಯ ಸುಭಾಷ್ ಪಾಂಡ್ರೆ, ದೂಂಡಿಬಾ ಮಾನೆ, ಅರ್ಜುನ್ ಮಾನೆ, ಚಂದ್ರಾಮ ರೊಗಿ, ಸದಾಶಿವ ಮಾನೆ, ತಾನಾಜಿ ಮಾನೆ, ಶಿವಾಜಿ ಪಾಂಡ್ರೆ, ಮಹಾಂತೇಶ ಕರಪೆ, ಹಣಮಂತ ಪುಟ್ಟಿ, ಸುರೇಶ್ ಡಾಳೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.




