ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ 5 ಮತ್ತು 10 ವರ್ಷದ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದ್ದು, ಅವರ ತಂದೆಯೇ ಮಕ್ಕಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬಳಿಕ ತಂದೆ ಹೋಟೆಲ್ ಕೊಠಡಿಯಲ್ಲೇ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕಿಯರ ತಂದೆಯನ್ನು ಬೆಂಗಳೂರಿನ ಉತ್ತರ ಭಾಗದ ನಾಗವಾರ ಮುಖ್ಯರಸ್ತೆ ನಿವಾಸಿ ಎಸ್.ಜಿ. ಇಮ್ರಾನ್ (40) ಎಂದು ಪೊಲೀಸರು ಗುರುತಿಸಿದ್ದಾರೆ. ಸೋಮವಾರ ಸಂಜೆ ಹೋಟೆಲ್‌ನ ಭದ್ರತಾ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಹೋಟೆಲ್ ಕೊಠಡಿಯಲ್ಲಿ ಇಮ್ರಾನ್ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ಹೋಟೆಲ್‌ನ ಭದ್ರತಾ ಸಿಬ್ಬಂದಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸದ್ಯ ಇಮ್ರಾನ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಮ್ರಾನ್ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದ. ಪತ್ನಿ ತನಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ. ಹೋಟೆಲ್ ಕೊಠಡಿಯಲ್ಲಿ ಪೊಲೀಸರಿಗೆ ದೊರೆತ ಟಿಪ್ಪಣಿಯೊಂದರಲ್ಲೂ ಈ ವಿಚಾರ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿವ ಪ್ರಲ್ಹಾದ್ ಜೋಶಿ ಸಹೋದರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; FIR ದಾಖಲು
ಇಮ್ರಾನ್ ಕ್ಯಾಬ್ ಸೇವಾ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಸುಮಾರು 7 ಗಂಟೆಗೆ ಇಮ್ರಾನ್ ತನ್ನ ಇಬ್ಬರು ಪುತ್ರಿಯರೊಂದಿಗೆ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಸೋಮವಾರ ಮಧ್ಯಾಹ್ನದ ವೇಳೆಗೆ ಕೊಠಡಿ ಖಾಲಿ ಮಾಡಬೇಕಿತ್ತು. ಆದರೆ, ನಿಗದಿತ ಸಮಯದ ಬಳಿಕವೂ ಇಮ್ರಾನ್ ಹಾಗೂ ಮಕ್ಕಳು ಹೋಟೆಲ್‌ನಿಂದ ಚೆಕ್‌ಔಟ್ ಮಾಡಿರಲಿಲ್ಲ. ಹೀಗಾಗಿ ಸಂಜೆ ಸುಮಾರು 4.30ರ ವೇಳೆಗೆ ಹೋಟೆಲ್ ಸಿಬ್ಬಂದಿ ಕೊಠಡಿಗೆ ತೆರಳಿ ಪರಿಶೀಲಿಸಿದ್ದಾರೆ. ಕೊಠಡಿಯ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಇಬ್ಬರು ಬಾಲಕಿಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಮ್ರಾನ್ ಅಸ್ವಸ್ಥ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮಕ್ಕಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ತನಿಖೆಯ ಬಳಿಕವೇ ಖಚಿತಪಡಿಸಿಕೊಳ್ಳಬೇಕಿದೆ. ಇಮ್ರಾನ್ ಚೇತರಿಸಿಕೊಂಡ ಬಳಿಕ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.




