ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮಾಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್ಗೆ ಕನಿಷ್ಠ ₹6,000 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದ ಹಿಂದೆಂದೂ ಕಾಣದಂತಹ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯನ್ನೇ ಅವಲಂಬಿಸಿ ಕೃಷಿ ಮಾಡಿರುವ ರೈತರು ಬಿತ್ತನೆ ಮಾಡಿದ ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿದಂತೆ ಹಲವು ಬೆಳೆಗಳು ಮಳೆ ಕೊರತೆಯಿಂದ ಒಣಗಿ ನಾಶವಾಗಿವೆ. ಪರಿಣಾಮ ರೈತರು ಮಾತ್ರವಲ್ಲದೆ ಕೃಷಿ ಕೂಲಿ ಕಾರ್ಮಿಕರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಸಂಘದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, “ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಘೋಷಿಸಿರುವ ಪ್ರತಿ ಎಕರೆಗೆ ₹2,500 ಪರಿಹಾರವು ವಾಸ್ತವಿಕ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ. ಕೃಷಿ ವೆಚ್ಚ, ಬಿತ್ತನೆ, ಗೊಬ್ಬರ, ಔಷಧಿ ಹಾಗೂ ಕಾರ್ಮಿಕರ ಕೂಲಿ ಸೇರಿದಂತೆ ರೈತರು ಮಾಡಿರುವ ಖರ್ಚನ್ನು ಪರಿಗಣಿಸಿ ಪ್ರತಿ ಎಕರೆಗೆ ಕನಿಷ್ಠ ₹25,000 ಬೆಳೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರೂ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರದ ಪರಿಣಾಮ ಕಬ್ಬಿನ ಇಳುವರಿ ಕುಸಿದಿದ್ದು, ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಮೂಲಕ ಪ್ರತಿ ಟನ್ಗೆ ಕನಿಷ್ಠ ₹6,000 ಬೆಂಬಲ ಬೆಲೆ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
This video cannot be played in your browser. Open the video directly
ಇದರ ಜೊತೆಗೆ, ಬರ ಮತ್ತು ಬೆಳೆ ನಷ್ಟದಿಂದ ಸಾಲದ ಹೊರೆ ಹೆಚ್ಚಿಸಿಕೊಂಡಿರುವ ರೈತರ ಸಾಲಗಳನ್ನು ಮನ್ನಾ ಮಾಡಿ, ಸಂಕಷ್ಟದಲ್ಲಿರುವ ಕೃಷಿಕ ಕುಟುಂಬಗಳಿಗೆ ತಕ್ಷಣ ಆರ್ಥಿಕ ನೆರವು ಒದಗಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಮುಖಂಡರಾದ ಪುಟ್ಟು ಗಡದನ್ನವರ, ಲಾಯಪ್ಪ ಇಂಗಳೆ, ವಿನೋದ ಖೇಡ, ಬಸನಗೌಡ ಧರ್ಮಗೊಂಡ, ಅನೀಲ ಇಕಡೆ, ಸಂಗಾರೆಡ್ಡಿ, ತೆಗ್ಗಿನಮನಿ, ಶಿವಶರಣರಡ್ಡಿ ಅವರಾದಿ, ಬಸವರಾಜ ಸುತಗುಂಡಿ, ಧರ್ಮ ಗಬಸಾವಳಗಿ, ಮಹಾದೇವಪ್ಪ ತೇಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





