ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳೊಂದಿಗೆ ಗ್ರಾಮೀಣ ಬದುಕು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಕಾಪುವಿನ ಪ್ಯಾಲೆಸ್ ಗಾರ್ಡನ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಸಹಯೋಗದಲ್ಲಿ ಭಾನುವಾರ ನಡೆದ ‘ಉಡುಪಿ ಟೂರಿಸಂ ಇನ್‌ಫ್ಲುಯೆನ್ಸರ್ಸ್ ಆ್ಯಂಡ್ ಸ್ಟೇಕ್‌ಹೋಲ್ಡರ್ಸ್ ಮೀಟ್–2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸಿ ತಾಣಗಳ ವೀಕ್ಷಣೆಗೆ ಮಾತ್ರ ಪ್ರವಾಸಿಗರನ್ನು ಸೀಮಿತಗೊಳಿಸದೆ, ಸ್ಥಳೀಯ ಗ್ರಾಮೀಣ ಜೀವನಶೈಲಿ, ಕೃಷಿ ಚಟುವಟಿಕೆಗಳು, ಸ್ಥಳೀಯ ಆಹಾರ ಪದ್ಧತಿ ಹಾಗೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ಅವಕಾಶ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಲೇಜ್ ವಾಕ್, ಫಾರ್ಮ್ ವಿಸಿಟ್, ಸ್ಥಳೀಯ ಆಹಾರ ಪರಿಚಯ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಅನುಭವ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರವಾಸೋದ್ಯಮ ಪ್ಯಾಕೇಜ್‌ಗಳಲ್ಲಿ ಅಳವಡಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದರು.
This video cannot be played in your browser. Open the video directly
ಜಾನಪದ ಕಲೆ, ಯಕ್ಷಗಾನ, ಸ್ಥಳೀಯ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ವಿಭಿನ್ನ ಅನುಭವ ನೀಡುವುದು ಉದ್ದೇಶವಾಗಿದೆ. ಕೃಷಿ ಪ್ರವಾಸೋದ್ಯಮದ ಬೆಳವಣಿಗೆಯಿಂದ ರೈತರು, ಗ್ರಾಮೀಣ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಕಲಾವಿದರಿಗೆ ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿವೆ. ‘ಉಡುಪಿ–ಸೀ ಬ್ರಾಂಡ್’ ಜೊತೆಗೆ ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮಕ್ಕೂ ಹೆಚ್ಚಿನ ಪ್ರಚಾರ ನೀಡುವ ಮೂಲಕ ಜಿಲ್ಲೆಯನ್ನು ವೈವಿಧ್ಯಮಯ ಪ್ರವಾಸಿ ಅನುಭವದ ತಾಣವನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳು, ಕೃಷಿ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು. ಸ್ಥಳೀಯರು ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರು ಒಗ್ಗೂಡಿ ಕಾರ್ಯನಿರ್ವಹಿಸಿದರೆ ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಉಡುಪಿ ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಕಡಲತೀರಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ದೇಶ-ವಿದೇಶಗಳ ಪ್ರವಾಸಿಗರಿಗೆ ಪರಿಣಾಮಕಾರಿಯಾಗಿ ಪರಿಚಯಿಸಬೇಕು. ಅಧಿಕಾರಿಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕರಾವಳಿ ಉಡುಪಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದು ಎಂದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯ ಮಾತನಾಡಿ, ಪ್ರವಾಸೋದ್ಯಮ ಇನ್‌ಫ್ಲುಯೆನ್ಸರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಕ್ಷೇತ್ರದ ವಿವಿಧ ಪಾಲುದಾರರ ಸಹಕಾರ ಪ್ರವಾಸೋದ್ಯಮದ ಬೆಳವಣಿಗೆಗೆ ಮಹತ್ವದ್ದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲೆಯ ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ತಾಣಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ಪ್ರವಾಸಿಗರನ್ನು ಸೆಳೆಯಬಹುದು ಎಂದರು.
ಕೃಷಿ ಪ್ರವಾಸೋದ್ಯಮದ ಕುರಿತು ಕಾರ್ಯದರ್ಶಿ ಗೌರವ ಶೇಣವ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 20 ಪ್ರವಾಸೋದ್ಯಮ ಇನ್‌ಫ್ಲುಯೆನ್ಸರ್‌ಗಳನ್ನು ಸನ್ಮಾನಿಸಲಾಯಿತು.
‘ನೈಜ ಉಡುಪಿಯ ಇತಿಹಾಸವನ್ನು ಪ್ರಚಾರ ಮಾಡುವ ಮೂಲಕ ಪ್ರವಾಸಿಗರು ಉಡುಪಿಯೊಂದಿಗೆ ಸಂಪರ್ಕ ಸಾಧಿಸಲಿ’ ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಹಾಗೂ ಹೊಸ ಪ್ರವಾಸೋದ್ಯಮ ಮಾದರಿಗಳ ಕುರಿತು ಚರ್ಚಿಸಲಾಯಿತು.
ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರು, ಇನ್‌ಫ್ಲುಯೆನ್ಸರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುದೀಪ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.






