ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ ಆ ಸ್ಥಾನಮಾನಕ್ಕೆ ಪೂರ್ಣ ಅರ್ಥ ಬರುತ್ತದೆ. ಭಾಷೆಯ ಉಳಿವು ಎಂದರೆ ಕೇವಲ ಪದಗಳ ಉಳಿವಲ್ಲ, ಅದು ಒಂದು ಇಡೀ ಸಂಸ್ಕೃತಿ ಮತ್ತು ಜನಸಮುದಾಯದ ಅಸ್ತಿತ್ವದ ಪ್ರಶ್ನೆ.
ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಜೀವಾಳ ತುಳು ಭಾಷೆ. ಇತ್ತೀಚೆಗೆ ಈ ಭಾಷೆಗೆ ಹೊಸ ಸ್ಥಾನಮಾನ ದೊರಕಿದೆ. ರಾಜ್ಯ ಸರ್ಕಾರವು ಮಂಗಳೂರಿನ ಪ್ರಜಾ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ (ಆಡಳಿತಾತ್ಮಕ) ಭಾಷೆಯ ಮಾನ್ಯತೆ ನೀಡುವ ಘೋಷಣೆ ಮಾಡಿದೆ. ಈ ಮೂಲಕ ಭಾಷಾ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಆದರೆ ಈ ಹೊಸ ಸ್ಥಾನಮಾನವಷ್ಟೇ ಸಾಕೇ ಎಂಬ ಪ್ರಶ್ನೆಯನ್ನು ತುಳು ಭಾಷಿಕರು ನಮಗೆ ನಾವೇ ಕೇಳಿಕೊಳ್ಳಬೇಕಾದ ಘಟ್ಟವಿದು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಜನರ ಮಾತೃಭಾಷೆ ತುಳು. ಆದ್ದರಿಂದ ಈ ಪ್ರದೇಶವನ್ನು ತುಳುನಾಡು ಎಂದೇ ಕರೆಯಲಾಗುತ್ತದೆ. ಅಷ್ಟಕ್ಕೂ ತುಳು ಭಾಷೆಯ ಪರಂಪರೆ ಅತಿ ಹಳೆಯದು. 1994ರಲ್ಲಿ ಸ್ಥಾಪಿತವಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಕಾರ ಈ ಭಾಷೆಯು 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಕ್ರಿಸ್ತಪೂರ್ವ 3 ನೇ ಶತಮಾನದ (ಸುಮಾರು 2,300 ವರ್ಷಗಳ ಹಿಂದೆ) ತಮಿಳಿನ ಪ್ರಸಿದ್ಧ ಸಂಗಮ್ ಸಾಹಿತ್ಯದ ‘ಅಹನಾನೂರು’ ಕಾವ್ಯದಲ್ಲಿ ಕವಿ ಮಾಮುಲಾರ್ ಅವರು ‘ತುಳುನಾಡು’ ಮತ್ತು ಅದರ ಸಂಸ್ಕೃತಿಯನ್ನು ಉಲ್ಲೇಖಿಸಿದ್ದಾರೆ. ಹೀಗೆ ಅತ್ಯಂತ ಶ್ರೀಮಂತ ಮೌಖಿಕ ಪರಂಪರೆ ಮತ್ತು ಜಾನಪದ ಸಾಹಿತ್ಯವನ್ನು ಹೊಂದಿರುವ ಭಾಷೆ ತುಳು.
“ಎರಡುವರೆ ಸಾವಿರ ವರ್ಷಗಳ ಹಿಂದೆ ದ್ರಾವಿಡ ಭಾಷಾ ವಲಯದಿಂದ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿದಂತಹ ಒಂದು ಸಮೃದ್ಧ ಭಾಷೆ ತುಳು. ಮರಾಠಿ, ಕೊರಗ, ಹವ್ಯಕ ಭಾಷೆ ಮಾತನಾಡುವವರೂ ಕರಾವಳಿಯಲ್ಲಿ ಇದ್ದಾರೆ. ಆದರೆ ಅವರೆಲ್ಲರೂ ಸಂಪರ್ಕ ಭಾಷೆಯಾಗಿ ಈ ಕರಾವಳಿಯಲ್ಲಿ ಮಾತನಾಡುವುದು ತುಳುವನ್ನು. ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ, ಈ ತುಳುನಾಡಿನ ಎಲ್ಲರ ಕೊಡುಗೆ ಇದೆ. ಹಾಗಾಗಿ ತುಳು ಇಷ್ಟು ವಿಸ್ತರಿಸಿದ್ದು, ಆಳವಾಗಿದ್ದು ” ಎನ್ನುತ್ತಾರೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್.
ಈಗ ಈ ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದು ಸಂತಸ. ಇದು ಭಾಷೆಯ ಅಸ್ತಿತ್ವಕ್ಕೆ ಬಲ ತುಂಬುತ್ತದೆ. ಆದರೆ ತುಳು ಭಾಷಿಕರ ಹೋರಾಟ ಇಷ್ಟಕ್ಕೇ ನಿಲ್ಲಬೇಕೇ? ಇದು ಕೇವಲ ಸಾಂಕೇತಿಕ ಗೌರವವಾಗಿ ಉಳಿಯಬೇಕೇ? ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಶಾಸನಬದ್ಧ ಬೆಂಬಲದ ಜತೆಗೆ ಆರ್ಥಿಕ ಮತ್ತು ಶೈಕ್ಷಣಿಕ ನೆರವು ಅತ್ಯಗತ್ಯವಲ್ಲವೇ? ಈ ಸ್ಥಾನಮಾನ ದೊರೆತ ತಕ್ಷಣವೇ ಭಾಷೆಯ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಯೇ? ಭಾಷಾ ಪ್ರೇಮಿಗಳು ಮತ್ತು ಸರ್ಕಾರದ ಮುಂದೆ ಇದಕ್ಕಿಂತ ಹೆಚ್ಚಿನ ಹೊಣೆಗಾರಿಕೆ ಇದೆಯೇ ಎಂಬ ಮುಖ್ಯ ಪ್ರಶ್ನೆಗಳು ಈ ಚರ್ಚೆಯಾಗಬೇಕಿವೆ.
ಇದನ್ನೂ ಓದಿ: ಮಂಗಳೂರು | ನರೇಂದ್ರ ಮೋದಿ ವಿಕಾಸ ಪುರುಷನಲ್ಲ ದೇಶದ ಅಭಿವೃದ್ಧಿಯ ವಿನಾಶ ಪುರುಷ: ದೀಪ್ಸಿತಾ ಧರ್ ವಾಗ್ದಾಳಿ
ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಯ ನೈಜ ಮೌಲ್ಯ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಹಲವು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯೋಜನಗಳು ಸಿಗಲಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪೂರ್ಣ ಪ್ರಮಾಣದ ಮಾನ್ಯತೆ, ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಗಳನ್ನು ತುಳುವಿನಲ್ಲಿ ಬರೆಯುವ ಅವಕಾಶ ಮತ್ತು ಕೇಂದ್ರ ಸರ್ಕಾರದಿಂದ ಭಾಷಾ ಅಭಿವೃದ್ಧಿಗೆ ವಿಶೇಷ ಅನುದಾನಗಳು ಲಭ್ಯವಾಗಲಿವೆ. ಪ್ರಸ್ತುತ ಭಾರತೀಯ ಸಂವಿಧಾನದ 8ನೇ ಪರಿಚ್ಛೇದದಡಿಯಲ್ಲಿ 22 ಭಾಷೆಗಳಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಮಾತನಾಡುವ ತುಳು ಭಾಷೆ ಈ ಪಟ್ಟಿಗೆ ಸೇರಲು ಸಂಪೂರ್ಣ ಅರ್ಹತೆ ಹೊಂದಿದೆ.
ಆದರೆ ಕೇವಲ 8ನೇ ಪರಿಚ್ಛೇದ ಸೇರ್ಪಡೆಯಷ್ಟೇ ತುಳು ಭಾಷೆಯ ಸಮಗ್ರ ಏಳಿಗೆಗೆ ಸಾಕಾಗದು. ಇದಕ್ಕೆ ಪ್ರಚಿತ ವಿದ್ಯಮಾನಗಳೇ ಸಾಕ್ಷಿ. ಅಷ್ಟಕ್ಕೂ ಈ ಪಟ್ಟಿಯಲ್ಲಿರುವ ಹಲವು ಭಾಷೆಗಳು ಇಂದಿಗೂ ಸೂಕ್ತ ಪ್ರೋತ್ಸಾಹವಿಲ್ಲದೆ ಬಳಲುತ್ತಿವೆ. ಹೀಗಾಗಿ, ರಾಜಕೀಯ ಇಚ್ಛಾಶಕ್ತಿಯೂ, ಆಡಳಿತಾತ್ಮಕ ಅನುಷ್ಠಾನವೂ ಮುಖ್ಯ. ಇವರೆಡೂ ಇಲ್ಲದಿದ್ದರೆ ಹೊಸ ಸ್ಥಾನಮಾನವು ಕೇವಲ ಕಾಗದದ ಮೇಲಿನ ಕಾಯಿದೆಯಾಗಿ ಉಳಿಯಬಹುದು.
ಪ್ರಧಾನವಾಗಿ ತುಳು ಭಾಷೆಗೆ ನಿಜವಾದ ಜೀವಕಳೆ ಬರಬೇಕಾದರೆ ಶಿಕ್ಷಣ ಮತ್ತು ದಿನನಿತ್ಯದ ಆಡಳಿತದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯ. ಪ್ರಸ್ತುತ ಶಾಲಾ ಶಿಕ್ಷಣದಲ್ಲಿ ತುಳು ಭಾಷೆಯನ್ನು ಒಂದು ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶವಿದೆ. ಆದರೆ ಆಯ್ಕೆ ಮಾಡುವ ವಿದ್ಯಾರ್ಥಿಗಳೆಷ್ಟು? ಅಷ್ಟಕ್ಕೂ ಕಲಿಯಲು ಮೂಲಸೌಕರ್ಯವಾದರೂ ಸರಿಯಾಗಿದೆಯೇ? ಉತ್ತರ ನೇರವಾಗಿ ಇಲ್ಲ.
ಪ್ರಾಥಮಿಕ ಶಿಕ್ಷಣ ಮಟ್ಟದಲ್ಲೇ ಮಗುವಿಗೆ ಮಾತೃಭಾಷೆಯಲ್ಲಿ ಕಲಿಕೆಗೆ ಪ್ರೋತ್ಸಾಹ ಸಿಗದಿದ್ದರೆ ಭಾಷೆಯ ಭವಿಷ್ಯ ಖಂಡಿತವಾಗಿಯೂ ಕ್ಷೀಣಿಸುತ್ತದೆ. ಅಷ್ಟೇ ಅಲ್ಲದೆ, ಕರಾವಳಿ ಭಾಗದ ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆಗಳು, ನ್ಯಾಯಾಲಯಗಳು, ಸಾರ್ವಜನಿಕ ಸೇವಾ ಕೇಂದ್ರಗಳು, ಬ್ಯಾಂಕ್‌ಗಳು, ಇತರೆ ಸ್ಥಳಗಳಲ್ಲಿ ತುಳು ಭಾಷೆ ಬಳಕೆಯಾಗುತ್ತಿದೆ. ಅದಕ್ಕೂ ಉತ್ತರ ಇಲ್ಲ. ಬಹುತೇಕ ಬ್ಯಾಂಕ್, ಇತರೆ ಕಚೇರಿಗಳಲ್ಲಿ ಉತ್ತರ ಭಾರತ ಮೂಲದವರಿದ್ದಾರೆ. ಹಿಂದಿ ಅಥವಾ ಇಂಗ್ಲೀಷ್‌ನಲ್ಲಷ್ಟೇ ಸಂವಾದ ನಡೆಸಬೇಕಾದ ಸ್ಥಿತಿಯಿದೆ. ಇವೆಲ್ಲವೂ ಬದಲಾಗುವ ಅಗತ್ಯವಿದೆ. ಈ ಎಲ್ಲಾ ಕಡೆಯೂ ತುಳು ಭಾಷೆಯ ಬಳಕೆ ಹೆಚ್ಚಾಗಬೇಕಿದೆ. ಹೀಗಾದರೆ ಮಾತ್ರ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸ್ವಂತ ಭಾಷೆಯಲ್ಲೇ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇದು ಆಡಳಿತ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ: ರಾಜಕೀಯ ಲಾಭ ಸಿಗುತ್ತಾ?
ಇದಕ್ಕೆ ಮುಖ್ಯ ಪರಿಹಾರ ಸ್ಥಳೀಯರಿಗೆ ಉದ್ಯೋಗ
ತುಳು ಭಾಷೆಯ ಹೋರಾಟವು ಕೇವಲ ಸಾಂಸ್ಕೃತಿಕ ಭಾವನೆಗೆ ಮಾತ್ರ ಸೀಮಿತವಾಗಿರದೆ, ಅದು ಕರಾವಳಿ ಭಾಗದ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳಿಗೂ ನೇರವಾಗಿ ಸಂಬಂಧ ಹೊಂದಿದೆ. ಯಾವುದೇ ಒಂದು ಪ್ರದೇಶದ ಭಾಷೆಗೆ ಅಧಿಕೃತ ಆಡಳಿತಾತ್ಮಕ ಮಾನ್ಯತೆ ಸಿಕ್ಕಾಗ, ಅಲ್ಲಿನ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವ ಹಕ್ಕು ಬಲಗೊಳ್ಳುತ್ತದೆ. ಆದರೆ ಕರಾವಳಿ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ರೈಲ್ವೆ, ಮಂಗಳೂರು ಬಂದರು (NMPT), ಪೆಟ್ರೋಕೆಮಿಕಲ್ ಉದ್ಯಮಗಳು (MRPL) ಹಾಗೂ ವಿವಿಧ ಕೇಂದ್ರ ಸರ್ಕಾರಿ ವಲಯಗಳಲ್ಲಿ ಸ್ಥಳೀಯರಲ್ಲದವರ ನೇಮಕಾತಿ ಹೆಚ್ಚಾಗುತ್ತಿದೆ.
ಸದ್ಯ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಹಲವು ವರ್ಷಗಳಿಂದ ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್’ (ತುಳುನಾಡ ಪ್ರಗತಿಯಲ್ಲಿ ತುಳು ತಾಯ ಮಕ್ಕಳಿಗೆ ದೊಡ್ಡ ಪಾಲು) ಎಂಬ ಘೋಷಣೆಯೊಂದಿಗೆ ಸ್ಥಳೀಯರಿಗೆ ಎಂಆರ್‌ಪಿಎಲ್‌ನಂತಹ ವಿವಿಧ ಕಂಪನಿಗಳಲ್ಲಿ ಉದ್ಯೋಗ ನೀಡಬೇಕು, ಉದ್ಯೋಗದಲ್ಲಿ ತುಳುವರಿಗೆ ಮೀಸಲಾತಿ ಇರಬೇಕು ಎಂದು ಆಂದೋಲನ ನಡೆಸಿದೆ. ಇಂದಿಗೂ ಈ ಆಂದೋಲನ ಮುಂದುವರೆದಿದೆ.
ಸ್ಥಳೀಯ ಗ್ರಾಹಕರೊಂದಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಜನರೊಂದಿಗೆ ವ್ಯವಹರಿಸಲು ತುಳು ಭಾಷೆಯ ಜ್ಞಾನ ಅತ್ಯಗತ್ಯ. ಸ್ಥಳೀಯ ಬ್ಯಾಂಕಿಂಗ್ ಮತ್ತು ಆಡಳಿತ ವಲಯದಲ್ಲಿ ತುಳು ಭಾಷೆ ಬಲ್ಲವರಿಗೆ ಅಥವಾ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು ಮುಖ್ಯ. ಇದರಿಂದಾಗಿ ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗಳಿಗೆ ಬರುವ ವಯೋವೃದ್ಧರು ಮತ್ತು ಗ್ರಾಮೀಣ ಜನರಿಗೆ ತಮ್ಮದೇ ಭಾಷೆಯಲ್ಲಿ ವ್ಯವಹರಿಸಲು ಅನುಕೂಲವಾಗುತ್ತದೆ. ಮತ್ತೊಂದೆಡೆ ಕರಾವಳಿಯ ವಿದ್ಯಾವಂತ ಯುವಜನರು ಉದ್ಯೋಗ ಅರಸಿ ಮುಂಬೈ, ಗಲ್ಫ್ ದೇಶಗಳು ಅಥವಾ ಬೆಂಗಳೂರಿಗೆ ಗುಳೆ ಹೋಗುವುದನ್ನು ತಪ್ಪಿಸಬೇಕಾದರೆ ಸ್ಥಳೀಯ ಉದ್ಯೋಗಗಳಲ್ಲಿ ತುಳು ಭಾಷಾ ಜ್ಞಾನವನ್ನು ಕಡ್ಡಾಯ ಅಥವಾ ಆದ್ಯತೆಯ ಅರ್ಹತೆಯನ್ನಾಗಿ ಮಾಡುವುದು ಅಗತ್ಯ.
ಇವೆಲ್ಲವುದರ ನಡುವೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾಷೆ ಬೆಳೆಯಲು ಡಿಜಿಟಲ್ ಜಗತ್ತಿಗೂ ನಾವು ತೆರೆದುಕೊಳ್ಳಬೇಕಾಗಿದೆ. ತುಳು ಲಿಪಿಯ ಪುನರುಜ್ಜೀವನ ಮತ್ತು ಅದನ್ನು ಯುನಿಕೋಡ್ (Unicode) ವ್ಯಾಪ್ತಿಗೆ ತರುವ ಪ್ರಯತ್ನಗಳು ಮೆಚ್ಚುವಂತಹದ್ದು. ಆದರೆ ಗೂಗಲ್ ಟ್ರಾನ್ಸ್‌ಲೇಟ್, ವಿಕಿಪೀಡಿಯಾ, ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಾಧನಗಳಲ್ಲಿ ತುಳು ಭಾಷೆಯ ಬಳಕೆಯನ್ನು ಹೆಚ್ಚಿಸಲು ತಾಂತ್ರಿಕ ಸಂಶೋಧನೆಗಳಿಗೆ ಹೆಚ್ಚಿನ ಅನುದಾನ ನೀಡುವತ್ತಲೂ ಸರ್ಕಾರ ಗಮನಹರಿಸಬೇಕಿದೆ. ಇದರೊಂದಿಗೆ ತುಳು ರಂಗಭೂಮಿ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳು ಭಾಷೆಯನ್ನು ಜೀವಂತವಾಗಿಟ್ಟಿವೆ. ಆದರೆ ಜಾಗತಿಕ ಮಟ್ಟದಲ್ಲಿ ತುಳು ಭಾಷಿಕರನ್ನು ಬೆಸೆಯಲು ಶೈಕ್ಷಣಿಕ ಪೀಠಗಳು ಮತ್ತು ಸಂಶೋಧನಾ ಕೇಂದ್ರಗಳಿಗೆ ಸರ್ಕಾರದ ನೆರವು ಇನ್ನಷ್ಟು ಬೇಕಿದೆ.
ಒಟ್ಟಾರೆಯಾಗಿ ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಅಥವಾ ಸಂವಿಧಾನಾತ್ಮಕ ಮಾನ್ಯತೆಯು ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು; ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಬರಿ ಹೆಸರು ಅಥವಾ ಸ್ಥಾನಮಾನದಿಂದ ಭಾಷೆ ಬೆಳೆಯುವುದಿಲ್ಲ. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ ಆ ಸ್ಥಾನಮಾನಕ್ಕೆ ಪೂರ್ಣ ಅರ್ಥ ಬರುತ್ತದೆ.
ಕರಾವಳಿಯ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಆಡಳಿತದಲ್ಲಿ ತುಳುವನ್ನು ಮುಕ್ತವಾಗಿ ಬಳಸುವುದು ಮತ್ತು ಸಂಶೋಧನೆಗಳಿಗೆ ಉತ್ತೇಜನ ನೀಡುವುದರ ಮೂಲಕ ಮಾತ್ರವೇ ತುಳು ಭಾಷೆಯನ್ನು ಮುಂಬರುವ ಪೀಳಿಗೆಗೆ ಸಶಕ್ತವಾಗಿ ತಲುಪಿಸಲು ಸಾಧ್ಯ. ಭಾಷೆಯ ಉಳಿವು ಎಂದರೆ ಕೇವಲ ಪದಗಳ ಉಳಿವಲ್ಲ, ಅದು ಒಂದು ಇಡೀ ಸಂಸ್ಕೃತಿ ಮತ್ತು ಜನಸಮುದಾಯದ ಅಸ್ತಿತ್ವದ ಪ್ರಶ್ನೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



