ಸುರಪುರ, ಕೆಂಭಾವಿ, ಶಹಾಪುರ ಮಾರ್ಗದಲ್ಲಿ ಹಳೆಯ ಕೆಕೆಆರ್‌ಟಿಸಿ ಬಸ್‌ಗಳ ಸಂಚಾರ ಹಾಗೂ ಹದಗೆಟ್ಟ ರಸ್ತೆ, ಸೇತುವೆಗಳ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ನಡೆಯುತ್ತಿದೆ ಎಂದು ಆರೋಪಿಸಿ ನಮ್ಮ ಕರ್ನಾಟಕ ಸೇನೆಯ ಕೆಂಭಾವಿ ಹೋಬಳಿ ಕಾರ್ಮಿಕ ಘಟಕ ಅಧ್ಯಕ್ಷ ಗುರುರಾಜ ಅಂಗಡಿ ಹೇಳಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಇತ್ತೀಚೆಗೆ ಸುರಪುರ, ಹುನಗುಂದ ರಾಜ್ಯ ಹೆದ್ದಾರಿಯ ಹೊಸ ಸಿದ್ದಾಪುರ ಹಾಗೂ ಅಲ್ಲಾಳ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್‌ಗಳು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆಗಳ ಕುರಿತು’ ತಿಳಿಸಿದರು.
‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ, ಅದಕ್ಕೆ ತಕ್ಕಂತೆ ಹೊಸ ಬಸ್‌ಗಳನ್ನು ರಸ್ತೆಗಿಳಿಸಿಲ್ಲ. ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಇಲ್ಲದ ಹಾಗೂ ತಾಂತ್ರಿಕ ದೋಷಗಳಿರುವ ಹಳೆಯ ಬಸ್‌ಗಳನ್ನು ಕಾರ್ಯಾಚರಣೆಗೆ ಬಳಸುತ್ತಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ’ ಎಂದು ಆರೋಪಿಸಿದರು.
‘ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಸುರಪುರ ಹಾಗೂ ಶಹಾಪುರ ಘಟಕಗಳಿಗೆ ಹೊಸ ಬಸ್‌ಗಳನ್ನು ಮಂಜೂರು ಮಾಡಬೇಕು. ನಾರಾಯಣಪುರ ಮುಖ್ಯ ಕಾಲುವೆ ಮೇಲಿನ ಹದಗೆಟ್ಟ ಸೇತುವೆಯನ್ನು ಶಾಶ್ವತವಾಗಿ ಪುನರ್‌ನಿರ್ಮಿಸಬೇಕು’ ಎಂದು ಅವರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಎಸ್‌ಐಆರ್ ಫಾರಂ ಬಿಎಲ್‌ಒಗಳೇ ಭರ್ತಿ ಮಾಡಲಿ; ದಲಿತ ಸಂಘರ್ಷ ಸಮಿತಿ ಆಗ್ರಹ
‘ಖಾಸಗಿ ವಾಹನಗಳಿಗೆ ಅನ್ವಯಿಸುವ ಸುರಕ್ಷತಾ ನಿಯಮಗಳನ್ನು ಸರ್ಕಾರಿ ಬಸ್‌ಗಳಿಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಳಪೆ ಬಸ್‌ಗಳನ್ನು ರಸ್ತೆಗೆ ಇಳಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆಕೆಆರ್‌ಟಿಸಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಕೆಂಭಾವಿ ಹೋಬಳಿಯಾದ್ಯಂತ ಬಸ್ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.




