ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ಮತದಾರರಿಗೆ ನೀಡಲಾಗುತ್ತಿರುವ ಪರಿಶೀಲನಾ ನಮೂನೆಯನ್ನು ಬಿಎಲ್‌ಒಗಳು ಅಥವಾ ಸರ್ಕಾರಿ ಅಧಿಕಾರಿಗಳೇ ಭರ್ತಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಆಗ್ರಹಿಸಿದೆ.
ಸುರಪುರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಜುಲೈ 29ರವರೆಗೆ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರಿಗೆ ಪರಿಶೀಲನಾ ನಮೂನೆಗಳನ್ನು ವಿತರಿಸುತ್ತಿದ್ದು, ಅವುಗಳಲ್ಲಿ 2002ರಿಂದ ಇಲ್ಲಿಯವರೆಗೆ ಮತದಾರರ ಪಟ್ಟಿಯ ವಿವಿಧ ಮಾಹಿತಿಗಳನ್ನು ದಾಖಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ಈ ರೀತಿಯ ಸಂಕೀರ್ಣ ನಮೂನೆಯನ್ನು ಸಾಮಾನ್ಯ ಮತದಾರರು ಮಾತ್ರವಲ್ಲ, ವಿದ್ಯಾವಂತರಿಗೂ ಭರ್ತಿ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ ಹೆಚ್ಚುವರಿ ಕಾಲಾವಕಾಶ ನೀಡಿ, ಬಿಎಲ್‌ಒಗಳು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಮೂಲಕವೇ ನಮೂನೆಗಳನ್ನು ಭರ್ತಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೆಚ್ಚಿನ ಸಂಖ್ಯೆಯ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ, ಜಿಲ್ಲಾ ಮುಖಂಡರಾದ ಮಾನು ಗುರಿಕಾರ, ಮಹಾದೇವಪ್ಪ ಬಿಜಾಸಪುರ, ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್, ಬಸವರಾಜ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಖಾಜಾಹುಸೇನ ಗುಡಗುಂಟಿ, ಮರೆಪ್ಪ ಕಾಂಗ್ರೆಸ್, ಮಹೇಶ ಕುಮಾರ ಸುಂಗಲ್, ಹುಲಗಪ್ಪ ಶೆಳ್ಳಗಿ, ಬಸವರಾಜ ಗೋನಾಲ ಸೇರಿದಂತೆ ಇನ್ನಿತರರು ಇದ್ದರು.




