ಜೀವನೋಪಾಯಕ್ಕಾಗಿ ಪ್ರತಿನಿತ್ಯ ಭೀಮಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಯುವಕನೊಬ್ಬ ಬಿರುಗಾಳಿಯ ಆರ್ಭಟಕ್ಕೆ ತೆಪ್ಪ ಉರುಳಿ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ತಾಲೂಕಿನ ತಳಕ ಗ್ರಾಮದ ಸಮೀಪ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ತಳಕ ಗ್ರಾಮದ ಹಣಮಂತ (ಚಂದಪ್ಪ ಅವರ ಪುತ್ರ) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ಅವರು ತೆಪ್ಪದಲ್ಲಿ ನದಿಗೆ ತೆರಳಿ ಮೀನಿನ ಬಲೆ ಬಿಡುತ್ತಿದ್ದಾಗ ಏಕಾಏಕಿ ಬಿರುಗಾಳಿ ಬೀಸಿದೆ. ಇದರಿಂದ ತೆಪ್ಪ ನಿಯಂತ್ರಣ ತಪ್ಪಿ ಉರುಳಿದ್ದು, ನೀರಿಗೆ ಬಿದ್ದ ಹಣಮಂತ ಅವರ ತಲೆಗೆ ಬಲೆ ಸುತ್ತಿಕೊಂಡ ಪರಿಣಾಮ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾದರೂ ಅಷ್ಟರಲ್ಲಾಗಲೇ ಹಣಮಂತ ಮೃತಪಟ್ಟಿದ್ದರು. ಬಳಿಕ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುತ್ನಾಳ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಪೊಲೀಸ್ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ₹1 ಲಕ್ಷ ಲಂಚ ಪಡೆಕ ಆರೋಪ : ತಹಸೀಲ್ದಾರ್ ಸೇರಿ ಇಬ್ಬರಿಗೆ 4 ವರ್ಷ ಜೈಲು
ಈ ವೇಳೆ ಮಾತನಾಡಿದ ಉಮೇಶ್ ಕೆ. ಮುತ್ನಾಳ, ಮೃತ ಹಣಮಂತ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ತುರ್ತು ಪರಿಹಾರ ಹಾಗೂ ಅಗತ್ಯ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.




