ಟ್ಯೂಷನ್‌ಗೆ ಹೋಗುವುದನ್ನು ತಪ್ಪಿಸಲು ತನ್ನ ಟ್ಯೂಷನ್ ಶಿಕ್ಷಕಿಯ ಅತ್ತೆಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ 16 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. ಈ ಮೂಲಕ ವಿಚಾರಣಾ ನ್ಯಾಯಾಲಯದ ಈ ಹಿಂದಿನ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅಷ್ಟು ಮಾತ್ರವಲ್ಲದೆ ಬಾಲಕನು ತನ್ನ ಮೇಲಿನ ಆರೋಪವನ್ನು ಶಿಕ್ಷಕಿಯ ಕಡೆಗೆ ತಿರುಗಿಸಲು ಯತ್ನಿಸುತ್ತಿರುವುದನ್ನು ಗಮನಿಸಿದರೆ, ಆತ ಮಾನಸಿಕವಾಗಿ ಸಾಕಷ್ಟು ಪ್ರಬುದ್ಧನಾಗಿದ್ದಾನೆ ಎಂಬುದು ತಿಳಿಯುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಸ್ಜೀತ್ ಸಿಂಗ್ ಬೇಡಿ ಅವರ ಪೀಠ ಅಭಿಪ್ರಾಯಿಸಿದೆ.
ಶಿಕ್ಷಕಿಗೆ ಆಕೆಯ ಅತ್ತೆಯೊಂದಿಗೆ ಉತ್ತಮ ಸಂಬಂಧವಿರಲಿಲ್ಲ ಮತ್ತು ಈ ಹಿಂದೆ ಒಮ್ಮೆ ಅವರಿಗೆ ಶಿಕ್ಷಕಿ ಹೊಡೆದಿದ್ದರು ಎಂದು ಹೇಳುವ ಮೂಲಕ ಬಾಲಕನು ಜಾಣ್ಮೆಯಿಂದ ತನ್ನ ಶಿಕ್ಷಕಿಯ ಕಡೆಗೆ ಅನುಮಾನ ತಿರುಗಿಸಲು ಯತ್ನಿಸಿದ್ದಾನೆ ಎಂದು ನ್ಯಾಯಾಲಯ ಜುಲೈ 6 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಸ್ಟಡಿ ಸಾವು: ಮೃತನ ಕುಟುಂಬಕ್ಕೆ ₹18.44 ಲಕ್ಷ ಪಾವತಿಸಲು ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಏನಿದು ಘಟನೆ, ನಡೆದಿರುವುದೇನು?
2025ರ ಆಗಸ್ಟ್ 5ರಂದು ಫರಿದಾಬಾದ್‌ನಲ್ಲಿ ಎಫ್‌ಐಆರ್ ಒಂದು ದಾಖಲಾಗಿದೆ. ಇದರ ಪ್ರಕಾರ 16 ವರ್ಷದ ವಿದ್ಯಾರ್ಥಿಯು ತನ್ನ ಟ್ಯೂಷನ್ ಶಿಕ್ಷಕಿಯ ಅತ್ತೆ ಶೌಚಾಲಯದಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಘಟನೆಯ ದಿನದಂದು ಬಾಲಕನು ಎಂದಿನಂತೆ ಮಧ್ಯಾಹ್ನ 12ರಿಂದ 12.30ರ ನಡುವೆ ಶಿಕ್ಷಕಿಯ ಮನೆಗೆ ಟ್ಯೂಷನ್‌ಗೆ ಬಂದಿದ್ದನು. ಆದರೆ ನಿಗದಿತ ಸಮಯಕ್ಕಿಂತ 5-7 ನಿಮಿಷ ಮುಂಚಿತವಾಗಿಯೇ ಬಂದಿದ್ದ ಆತ, ತನ್ನ ನೋಟ್‌ಬುಕ್ ತಂದಿರಲಿಲ್ಲ. ಶಿಕ್ಷಕಿಯು ಆತನನ್ನು ನೋಟ್‌ಬುಕ್ ತರಲು ವಾಪಸ್ ಕಳುಹಿಸಿ, ತಾವು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಅತ್ತೆಯ ಕಿರುಚಾಟ ಕೇಳಿ ಹೊರಗೆ ಬಂದು ನೋಡಿದಾಗ, ಅತ್ತೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಮತ್ತು ಬಾಲಕ ಅದೇ ಕೋಣೆಯಲ್ಲಿ ನಿಂತಿರುವುದು ಕಂಡುಬಂದಿದೆ. ತಕ್ಷಣ ಶಿಕ್ಷಕಿ ಕಿರುಚುತ್ತಾ ಹೊರಗೆ ಓಡಿಬಂದು ನೆರೆಹೊರೆಯವರನ್ನು ಸಹಾಯಕ್ಕೆ ಕರೆದಿದ್ದರು.
ಇದನ್ನೂ ಓದಿ: ಮುಟ್ಟಿನ ರಜೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹೈಕೋರ್ಟ್ ಆದೇಶ: ಜನವಾದಿ ಮಹಿಳಾ ಸಂಘಟನೆ ಸ್ವಾಗತ
ಅಪರಾಧ ನಡೆದ ಸಮಯದಲ್ಲಿ ಬಾಲಕನಿಗೆ 16 ವರ್ಷ 4 ತಿಂಗಳು ವಯಸ್ಸಾಗಿತ್ತು. ಆತನನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ (JJB) ಮುಂದೆ ಹಾಜರುಪಡಿಸಿದಾಗ, ಬಾಲಕನ ವಯಸ್ಸು, ಆತನಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲದಿರುವುದು ಮತ್ತು ಉತ್ತಮ ಶೈಕ್ಷಣಿಕ ದಾಖಲೆಯನ್ನು ಪರಿಗಣಿಸಿ, ಜನವರಿ 5ರಂದು ಆತನನ್ನು ಅಪ್ರಾಪ್ತ (ಜುವೆನೈಲ್) ಎಂದೇ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಬೋರ್ಡ್ ಹೇಳಿತ್ತು. ಆದರೆ ಹೈಕೋರ್ಟ್ ಈಗ ಆತನನ್ನು ವಯಸ್ಕನೆಂದೇ ಪರಿಗಣಿಸಿ ಕಾನೂನು ಪ್ರಕ್ರಿಯೆ ನಡೆಸಲು ಆದೇಶಿಸಿದೆ.
ಮನೋವೈದ್ಯಕೀಯ ವರದಿಗಳ ಪರಿಶೀಲನೆ
ಜುಸ್ಥೆನೈಲ್ ಜಸ್ಟಿಸ್ ಬೋರ್ಡ್ (JJB) ವರದಿಯ ಪ್ರಕಾರ, ಬಾಲಕನು ಉತ್ತಮ ವಾತಾವರಣದಲ್ಲಿ ಬೆಳೆದಿದ್ದು, ಶಿಸ್ತುಬದ್ಧನಾಗಿದ್ದ ಮತ್ತು ಧಾರ್ಮಿಕ ಪ್ರವೃತ್ತಿ ಹೊಂದಿದ್ದ ಎಂದು ತಿಳಿದುಬಂದಿದೆ. ಆತನಿಗೆ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿದ್ದರೂ, ಆತನ ಸಾಮಾಜಿಕ ತನಿಖೆ, ಮನೋವೈದ್ಯಕೀಯ ಮತ್ತು ಮೌಲ್ಯಮಾಪನ ವರದಿಗಳನ್ನು ಪರಿಶೀಲಿಸಿದಾಗ, ತಾನು ಮಾಡುತ್ತಿರುವ ಅಪರಾಧದ ಗಂಭೀರತೆ ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಷ್ಟು ಮಾನಸಿಕ ಸಾಮರ್ಥ್ಯ ಹಾಗೂ ಪ್ರಬುದ್ಧತೆ ಆತನಿಗೆ ಇತ್ತು ಎಂಬುದು ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಬೇಡಿ ತಿಳಿಸಿದ್ದಾರೆ.




