ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆಯಂತೆ, ಪಿ. ತ್ಯಾಗರಾಜ್ (ಮಾಧ್ಯಮ ಕಾರ್ಯದರ್ಶಿ-1), ಆರ್ ಜಯಪ್ರಕಾಶ್ (2ನೇ ಕಾರ್ಯದರ್ಶಿ) ಮತ್ತು ರಾಘವೇಂದ್ರ ಭಟ್ ಅವರನ್ನು 3ನೇ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಈ ಪೈಕಿ ರಾಘವೇಂದ್ರ ಭಟ್ ಅವರ ನೇಮಕ ಇದೀಗ ತೀವ್ರ ಚರ್ಚೆಗೆ ಮತ್ತು ವಿರೋಧಾಭಾಸಕ್ಕೆ ಕಾರಣವಾಗಿದೆ.
ರಾಘವೇಂದ್ರ ಭಟ್ ಅವರು 2021ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಅತೀವವಾಗಿ ವಾಗ್ದಾಳಿ ನಡೆಸಿದ್ದ ಪೋಸ್ಟ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿಯವರನ್ನು ʼಫಟಿಂಗʼ, ʼಅಂಡೆ ಪಿರ್ಕಿʼ, ʼಓಡುಗಳ್ಳʼ ಎಂದು ಹೀಯಾಳಿಸಿದ್ದಲ್ಲದೆ, ಕರ್ನಾಟಕ ಕಾಂಗ್ರೆಸ್‌ನ ನಾಯಕರ ಕುರಿತಾಗಿಯೂ ಕಟು ಟೀಕೆ ಮಾಡಿದ್ದರು.

ರಾಘವೇಂದ್ರ ಭಟ್ ಅಂದು ಬರೆದಿದ್ದ ಪೋಸ್ಟ್ ಇಲ್ಲಿದೆ…
“ಈ ಫಟಿಂಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗ ಎಂದು ಕರೆಸಿಕೊಳ್ಳುವುದಕ್ಕೆ ಅರ್ಹನೇ ? ಬಂಗಾಲದಲ್ಲಿ ಪಕ್ಷ ಸೊನ್ನೆ ಸುತ್ತಲಿದೆ ಎಂದು ಅರ್ಥವಾಗುತ್ತಿದ್ದಂತೆ ರಣರಂಗದಿಂದ ಓಟಕಿತ್ತ ಓಡುಗಳ್ಳನಿಗೆ ಸಂಭ್ರಮಿಸುವುದಕ್ಕೆ ಸಿಕ್ಕ ಕಾರಣ ಏನೆಂಬುದನ್ನು ನೋಡಿ. ಒಂದು ಕಾಲದಲ್ಲಿ ದೇಶದ ತುಂಬಾ ಅಧಿಕಾರ ಸ್ಥಾಪಿಸಿ ಆಳ್ವಿಕೆ ನಡೆಸಿದ ಪಕ್ಷದ ಆಧಾರ ಸ್ಥಂಬವೇ ಕುಸಿದು ಹೋಗಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವೇ ಪ್ರಶ್ನಿಸುವ ಹಂತಕ್ಕೆ ಬಂದಿದೆ. ಅಂಥದರಲ್ಲಿ ಈ ವ್ಯಕ್ತಿ ಪರರ ಸೋಲಿನಲ್ಲಿ ಖುಷಿ ಕಾಣುತ್ತಿದ್ದಾನೆ. ಹಾಗೆ ನೋಡಿದರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಆಸ್ಸಾಂ ಮತ್ತು ಕೇರಳದಲ್ಲಿ ಸೋಲಿನ ಸರಪಣಿಯನ್ನು ಕಡಿದುಕೊಂಡು ಸೆಟೆದು ನಿಲ್ಲುವುದಕ್ಕೆ ಅವಕಾಶವಿತ್ತು. ಆದರೆ ಈ ಮಹಾಶಯ ಚುನಾವಣೆ ಸಂದರ್ಭದಲ್ಲೂ ಒಬ್ಬ ಸ್ಥಳೀಯ ನಾಯಕನನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಪಕ್ಷವನ್ನು ರಣಸನ್ನಾಹಕ್ಕೆ ಪ್ರೇರೇಪಿಸಲಿಲ್ಲ. ಟ್ವೀಟ್ ರಲ್ಲಿ ತೀಟೆ , ತರಲೆ ಮಾಡುತ್ತಾ ಕಾಲ ಕಳೆದ. ಈತನನ್ನು ಸಂಸದನನ್ನಾಗಿ ಆಯ್ಕೆ ಮಾಡಿದ ಕೇರಳದಲ್ಲಿ ಅಲ್ಪಸಂಖ್ಯಾತ ಸಮುದಾಯವೇ ಈತನನ್ನು ತಿರಸ್ಕರಿಸಿತು. ಆಸ್ಸಾಂದಲ್ಲೂ ಹಾಗೆ ಆಯ್ತು. ಪುದುಚೆರಿಯಲ್ಲೂ ಉರುಳಿದ. ಆದರೂ ಕಾಂಗ್ರೆಸಿಗರಿಗೆ ಇನ್ನೂ ಈತನ ಮೇಲೆ ವಿಶ್ವಾಸ. ಮುಂದಿನ ಪ್ರಧಾನಿ ಎಂದು ಬಿಂಬಿಸುವ ತವಕ. ನೋಡುತ್ತಾ ಇರಿ, ಈ ಅಂಡೆ ಪಿರ್ಕಿ ಕೈಯಲ್ಲಿ ಪಕ್ಷದ ನಿರ್ಧಾರ ಕೈಗೊಳ್ಳುವ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲೂ ಮುಂದೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮಾಡುತ್ತಾನೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಂಥ ಪ್ರಬಲ ಸ್ಥಳೀಯ ನಾಯಕರ ಮಧ್ಯೆ ಕೊನೆ ಕ್ಷಣದ ವರೆಗೂ ಭಿನ್ನಾಭಿಪ್ರಾಯ ಉಳಿಯುವಂತೆ ಮಾಡುತ್ತಾನೆ. ನಂತರ ಯುದ್ಧದಲ್ಲಿ ಸೋತು ಕೈ ಹಿಸುಕಿಕೊಳ್ಳುತ್ತಾನೆ. ಅನ್ಯರ ಸೋಲಿನಲ್ಲಿ ತನ್ನ ಗೆಲುವು ಅರಸುವವ ಎಂದಿಗೂ ನಾಯಕನ್ನಲ್ಲ. ರಾಹುಲ್ ನೆಚ್ಚಿಕೊಂಡರೆ ಕಾಂಗ್ರೆಸ್ ಗೆ ಅರಬ್ಬೀ ಸಮುದ್ರವೇ ಗತಿಯಷ್ಟೆ.”
ಇದನ್ನೂ ಓದಿ: ʼಅಪ್ಪ-ಅಮ್ಮ ಕ್ಷಮಿಸಿ, ಈ ಅವಮಾನ ಸಹಿಸಲಾರೆʼ: ಶಿಕ್ಷಕಿ ಬೈದರೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
ಈ ರೀತಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ವ್ಯಕ್ತಿ, ಇಂದು ಅದೇ ಪಕ್ಷದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಸಚಿವಾಲಯದಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. “ಯಾರ ವಿರುದ್ಧ ಅಂದು ಕಟುವಾದ ಟೀಕೆ ಮಾಡಿದ್ದರೋ, ಇಂದು ಅವರದ್ದೇ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.




