ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಸರ್ಕಾರದ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ವಿದೇಶಾಂಗ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 200 ಅಧಿಕಾರಿಗಳು ವಿರೋಧ ಪಕ್ಷಗಳ ಸಂಪರ್ಕದಲ್ಲಿದ್ದು, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ಸರ್ಕಾರದೊಳಗಿನ ವಿವಿಧ ಇಲಾಖೆಗಳ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ನಮಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, “ನಾವು ಕೇಳುತ್ತಿರುವುದು ಇಷ್ಟೇ, ಗ್ಯಾನೇಶ್ ಕುಮಾರ್ ಅವರು ಏಕೆ ರಾಜೀನಾಮೆ ನೀಡುತ್ತಿಲ್ಲ? ಸಂವಿಧಾನವನ್ನು ಎತ್ತಿಹಿಡಿಯುವವರೆಗೆ, ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಅವರಿಗೆ ತಮ್ಮ ತಪ್ಪಿನ ಬಗ್ಗೆ ಅರಿವಿರಬಹುದು ಮತ್ತು ಅವರು ಯಾರದ್ದೋ ಒತ್ತಡಕ್ಕೆ ಒಳಗಾಗಿರಬಹುದು. ರಾಜೀನಾಮೆ ನೀಡಿ ಪ್ರಕರಣದಲ್ಲಿ ಸಾಕ್ಷಿಯಾಗಿ ಸಹಕರಿಸಿ ಎಂದು ಗ್ಯಾನೇಶ್ ಕುಮಾರ್‌ಗೆ ಸಲಹೆ ನೀಡಿದ್ದಾರೆ.
“ನೀವು ತಪ್ಪು ಮಾಡಿದ್ದೀರಿ. ನೀವು ಮಾಡಿದ ತಪ್ಪಿನ ಹಿಂದಿನ ಸೂತ್ರಧಾರಿ ನೀವಲ್ಲ ಎಂಬುದು ನಮಗೆ ತಿಳಿದಿದೆ. ನಿಮ್ಮನ್ನು ಕ್ಷಮಿಸುವ ಬಗ್ಗೆಯೂ ನಾವು ಯೋಚಿಸಬಹುದು. ನೀವು ಒತ್ತಡದಲ್ಲಿದ್ದೀರಿ ಎಂಬುದು ನಮಗೆ ಅರ್ಥವಾಗುತ್ತದೆ. ಆದ್ದರಿಂದ ರಾಜೀನಾಮೆ ನೀಡಿ, ಪ್ರಕರಣದಲ್ಲಿ ಸಾಕ್ಷಿಯಾಗಿ ಸಹಕರಿಸಿ” ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷಗಳ ಮೆರವಣಿಗೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಿರುವುದನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಸುಮಾರು 30 ಸಾವಿರ ಭದ್ರತಾ ಸಿಬ್ಬಂದಿಯನ್ನು ರಸ್ತೆಗಳಲ್ಲಿ ನಿಯೋಜಿಸಿರುವುದೇಕೆ? ಭಾರತದ ರಾಜಧಾನಿಯನ್ನೇ ಜೈಲಿನಂತೆ ಮಾಡಿರುವುದೇಕೆ? ಗ್ಯಾನೇಶ್ ಕುಮಾರ್ ಅವರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರದ ಎನ್‌ಡಿಎ ಸರ್ಕಾರ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಂಡಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಾಜಧಾನಿಯಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದು, ಯುವಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: ʼವೋಟ್ ಚೋರಿʼ ಸಂಗ್ರಾಮ; ಸುಪ್ರೀಂ ಕೋರ್ಟ್ ಕಡೆಗೆ ಕಾಂಗ್ರೆಸ್ ಮೆರವಣಿಗೆ
ಮುಖ್ಯ ಚುನಾವಣಾ ಆಯುಕ್ತರನ್ನು ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡುತ್ತಿದೆ. ಇದು ಜನರು ಹಾಗೂ ಮೋದಿ, ಅಮಿತ್ ಶಾ ಮತ್ತು ಗ್ಯಾನೇಶ್ ಕುಮಾರ್ ನಡುವಿನ ಹೋರಾಟ. ಒಂದು ಕಡೆ ಎಲ್ಲ ವಿರೋಧ ಪಕ್ಷಗಳಿವೆ. ಮತ್ತೊಂದು ಕಡೆ ಭಾರತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಗ್ಯಾನೇಶ್ ಕುಮಾರ್ ಇದ್ದಾರೆ” ಎಂದು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಈ ಆರೋಪಗಳ ಕುರಿತು ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ದೆಹಲಿಯಲ್ಲಿ ಪ್ರತಿಭಟನೆಗಳು ಮತ್ತು ಭದ್ರತಾ ಕ್ರಮಗಳು ರಾಜಕೀಯ ಚರ್ಚೆಯ ಕೇಂದ್ರವಾಗಿವೆ.




