2013ರ ಗೋವಾ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರು ಶರಣಾಗತಿಯಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪೀಠವು ಎರಡು ವಾರಗಳೊಳಗೆ ಶರಣಾಗುವಂತೆ ತೇಜ್‌ಪಾಲ್‌ಗೆ ನಿರ್ದೇಶನ ನೀಡಿದೆ.
ಬಾಂಬೆ ಹೈಕೋರ್ಟ್ ಆಗಸ್ಟ್ 6ರಂದು ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿ, ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶರಣಾಗತಿ ಪ್ರಮಾಣಪತ್ರ ಸಲ್ಲಿಸುವ ಷರತ್ತಿನೊಂದಿಗೆ ಅವರ ಮೇಲ್ಮನವಿಯನ್ನು ಸೆಪ್ಟೆಂಬರ್ 22ರಂದು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
2013ರಲ್ಲಿ ಗೋವಾದ ಹೋಟೆಲ್‌ನಲ್ಲಿ ‘ತೆಹಲ್ಕಾ’ ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲಿಫ್ಟ್‌ನಲ್ಲಿ ಅತ್ಯಾಚಾರ ನಡೆಸಿದ ಆರೋಪ ತೇಜ್‌ಪಾಲ್ ಮೇಲಿತ್ತು. 2021ರಲ್ಲಿ ಗೋವಾದ ವಿಚಾರಣಾ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು.
ಆದರೆ ಗೋವಾ ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಿದ ಬಾಂಬೆ ಹೈಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿ ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿತ್ತು.ಗೋವಾ ಸರ್ಕಾರವು ಹತ್ತು ವರ್ಷಗಳ ಶಿಕ್ಷೆ ಅಪರಾಧದ ಗಂಭೀರತೆಗೆ ಅನುಗುಣವಾಗಿಲ್ಲ ಎಂದು ವಾದಿಸಿ, ಅದನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸುವಂತೆಯೂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.




