ಅಯೋಧ್ಯೆಯ ರಾಮಮಂದಿರ ದೇಣಿಗೆ ದುರುಪಯೋಗದ ಕುರಿತು ತನಿಖಾ ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ್ ವಿರುದ್ಧ ದಾಖಲಾಗಿರುವ ರಸ್ತೆ ಗಲಾಟೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಂಧನದಿಂದ ರಕ್ಷಣೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆಯನ್ನೂ ಕೋರ್ಟ್ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಸದ್ಯ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದ ಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.
ಅಭಿಷೇಕ್ ಉಪಾಧ್ಯಾಯ್ ಅವರು ರಾಮಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ದೇಣಿಗೆ ದುರುಪಯೋಗ ಹಾಗೂ ಉತ್ತರ ಪ್ರದೇಶ ಆಡಳಿತದಲ್ಲಿನ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಇದೇ ಕಾರಣಕ್ಕೆ ತಮ್ಮ ವಿರುದ್ಧ ರಸ್ತೆ ಗಲಾಟೆ ಪ್ರಕರಣ ದಾಖಲಿಸಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದು ತಮ್ಮನ್ನು ಗುರಿಯಾಗಿಸಿಕೊಂಡು ದಾಖಲಿಸಿರುವ ಪ್ರತೀಕಾರದ ಪ್ರಕರಣ ಎಂದು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಆಗಸ್ಟ್ 18ರಂದು ದ್ವಿಚಕ್ರ ವಾಹನ ಸವಾರರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ಕಾರು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು, ಬಳಿಕ ತಮ್ಮನ್ನು ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಪಾಧ್ಯಾಯ್ ಪರ ವಾದಿಸಿದ ಹಿರಿಯ ವಕೀಲ ಪ್ರದೀಪ್ ರೈ, ಪ್ರಕರಣವು ಕಾಲ್ಪನಿಕ ಆರೋಪಗಳ ಆಧಾರದ ಮೇಲೆ ದಾಖಲಾಗಿದ್ದು, ನ್ಯಾಯಯುತ ತನಿಖೆ ನಡೆಯಬೇಕು ಎಂದು ಕೋರಿದರು. ಈ ವೇಳೆ, ನಿಜವಾಗಿಯೂ ಕಾರು ಡಿಕ್ಕಿ ಹೊಡೆದು ಬಳಿಕ ಜಾತಿ ನಿಂದನೆ ಮಾಡಿದ್ದರೆ ಅದು ಅಪರಾಧವಾಗುತ್ತದೆ. ಆದರೆ ಆರೋಪ ಸಂಪೂರ್ಣ ಕಲ್ಪಿತವಾಗಿದ್ದರೆ ವಿಚಾರ ಬೇರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ಉಪಾಧ್ಯಾಯ್ ಅವರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ, ಗಾಜಿಯಾಬಾದ್‌ನ ಇಂದಿರಾಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ನೀಡಬೇಕು ಹಾಗೂ ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅನುಸರಣೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಇದನ್ನೂ ಓದಿ: ಕಾರಿನ ಮೇಲೆ 3,400 ಕಿಸ್‌ಮಾರ್ಕ್; ಸೋಶಿಯಲ್ ಮೀಡಿಯಾ ಸ್ಟಂಟ್‌ಗೆ ₹5,500 ದಂಡ
ತಮ್ಮ ಅರ್ಜಿಯಲ್ಲಿ ಉಪಾಧ್ಯಾಯ್, ಅಪ್ರಾಪ್ತ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ತಮ್ಮ ಕಾರನ್ನು ತಡೆದು ಗಲಾಟೆ ಮಾಡಿದ್ದ. ಮಗಳು ಜೊತೆಯಲ್ಲಿದ್ದ ಕಾರಣ ತಾವು ಯಾವುದೇ ವಾಗ್ವಾದ ಅಥವಾ ಸಂಘರ್ಷಕ್ಕೆ ಇಳಿಯದೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ. ಯಾವುದೇ ಡಿಕ್ಕಿ ಅಥವಾ ದೈಹಿಕ ಸಂಘರ್ಷ ನಡೆದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಮುಂದಾದಾಗ, ಪೊಲೀಸರು ಕೆಲ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳ ಮಾಲೀಕರನ್ನು ಸಂಪರ್ಕಿಸಿ ಸಂಬಂಧಿತ ಸಿಸಿಟಿವಿ ದೃಶ್ಯಗಳನ್ನು ಅಳಿಸುವಂತೆ ಅಥವಾ ನೀಡದಂತೆ ಒತ್ತಾಯಿಸಿದ್ದಾರೆ ಎಂದು ಉಪಾಧ್ಯಾಯ್ ಆರೋಪಿಸಿದ್ದಾರೆ.
ರಾಮಮಂದಿರ ದೇಣಿಗೆ ಅಕ್ರಮದ ವರದಿ ಹೊರತಾಗಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆಪ್ತರೆಂದು ಹೇಳಲಾಗಿರುವ ಐಎಎಸ್ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಭೂ ವ್ಯವಹಾರದ ಬಗ್ಗೆಯೂ ಉಪಾಧ್ಯಾಯ್ ತನಿಖಾ ವರದಿ ಪ್ರಕಟಿಸಿದ್ದರು. ಭದೋಹಿಯಲ್ಲಿ ಸುಮಾರು ₹20 ಕೋಟಿ ಮೌಲ್ಯದ ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದ ಆರೋಪಗಳನ್ನು ವರದಿ ಒಳಗೊಂಡಿತ್ತು.




