2020ರ ದೆಹಲಿ ಗಲಭೆ ವಿಚಾರದಲ್ಲಿ ಜೈಲು ಸೇರಿರುವ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮತ್ತೊಮ್ಮೆ ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಇಬ್ಬರಿಗೂ ಜಾಮೀನು ನೀಡಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದಿದೆ.
2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆ ಸಂಭವಿಸಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಮತ್ತು ಭಾರತೀಯ ದಂಡಸಂಹಿತೆಯ ಹಲವು ಕಠಿಣ ಸೆಕ್ಷನ್‌ಗಳಡಿ ಶರ್ಜೀಲ್ ಇಮಾಮ್ ಅವರನ್ನು 2020ರ ಜನವರಿಯಲ್ಲಿ ಮತ್ತು ಉಮರ್ ಖಾಲಿದ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾ
ಇಬ್ಬರೂ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಇನ್ನೂ ಮುಖ್ಯ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ, ಆರೋಪ ನಿಗದಿ ಪ್ರಕ್ರಿಯೆಗಳು ವಿಳಂಬವಾಗುತ್ತಿದೆ. ಆದರೆ ದೆಹಲಿಯ ವಿಚಾರಣಾ ನ್ಯಾಯಾಲಯ, ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಇಬ್ಬರ ಜಾಮೀನು ಅರ್ಜಿಗಳು ಸತತವಾಗಿ ತಿರಸ್ಕೃತಗೊಂಡಿವೆ.
This video cannot be played in your browser. Open the video directly
ಈ ರೀತಿ ವಿಚಾರಣೆಯಿಲ್ಲದೆ ಸುದೀರ್ಘ ಅವಧಿಗೆ ಕಸ್ಟಡಿಯಲ್ಲಿಟ್ಟಿರುವುದಕ್ಕೆ ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆಯ ‘ಸ್ವೇಚ್ಛಾನುಸಾರ ಬಂಧನ ಕುರಿತ ಕಾರ್ಯನಿರತ ಗುಂಪು’ (UNWGAD) ಈ ಬಂಧನವು ಅನಿಯಂತ್ರಿತ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದೆ. ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದೆ. ಆದರೆ ಈವರೆಗೆ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಪದೇ ಪದೇ ಜಾಮೀನು ತಿರಸ್ಕರಿಸಲಾಗುತ್ತಿದೆ. ಇವೆಲ್ಲವುದರ ನಡುವೆ ಕೇಂದ್ರ ಸರ್ಕಾರವು ಯುಎಪಿಎ ಕಾಯ್ದೆಯನ್ನು ದುರುಪಯೋಗ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.





