ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ ಬಳಕೆಯ ಸಕ್ಕರೆಗೆ ರೂ.100 ಬೆಲೆ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆದ ರೈತ ಹೋರಾಟವು ಉತ್ತರ ಕರ್ನಾಟಕದ ರೈತರ ಒಗ್ಗಟ್ಟು, ಶಕ್ತಿ, ತಾಳ್ಮೆ ಮತ್ತು ಹೋರಾಟದ ಸ್ವರೂಪವನ್ನು ಮತ್ತೊಮ್ಮೆ ಜ್ಞಾಪಿಸಿದೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಈ ಹೋರಾಟಕ್ಕೆ ಮಹಾರಾಷ್ಟ್ರ, ತೆಲಂಗಾಣ ಮಾತ್ರವಲ್ಲದೆ ರಾಜ್ಯದ ಮಂಡ್ಯ, ಮೈಸೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಗದಗ, ಬೆಳಗಾವಿ, ಹಾವೇರಿ, ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ರೈತರು ಟ್ರ್ಯಾಕ್ಟರ್, ಕ್ರೂಸರ್, ಲಾರಿಗಳಲ್ಲಿ ಬಂದಿದ್ದರು.
ರೈತರು ಕಾರ್ಖಾನೆಗಳಿಂದ ಎಥೆನಾಲ್ ಮಾತ್ರವಲ್ಲದೆ ಎಲ್ಲಾ ಉತ್ಪನ್ನಗಳನ್ನು ಖರೀದಿಸಬೇಕು, ವಿಬಿಜಿ ರಾಮ್-ಜಿ ಯೋಜನೆಯನ್ನು ಸಂಪೂರ್ಣ ಕೃಷಿಗೆ ಬಳಸಬೇಕು ಹಾಗೂ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಹೋರಾಟ ನಡೆಸಿದರು.
ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10.45ರಿಂದ ಮಧ್ಯಾಹ್ನ 3ರವರೆಗೆ ರೈತರು ಪ್ರತಿಭಟನೆ ನಡೆಸಿದರು. ನಂತರ ಕೇಶ್ವಾಪುರದ ಮಯೂರಿ ಎಸ್ಟೇಟ್‌ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದರು. ಬ್ಯಾರಿಕೇಡ್‌ಗಳನ್ನು ಭೇದಿಸಿ ಸಚಿವರ ನಿವಾಸದ ಎದುರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
This video cannot be played in your browser. Open the video directly

ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆಯಿಂದ ಮದ್ಯಾಹ್ನ ಗಂಟೆಗಳವರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 7.30ರವರೆಗೆ ರಮೇಶ ಭವನದ ಎದುರು ರೈತರು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಯಿತು. ಬೆಳಗಾವಿ, ಹಾವೇರಿ, ಗದಗ, ವಿಜಯಪುರ ಭಾಗಗಳಿಂದ ಬಂದಿದ್ದ ರೈತರ ವಾಹನಗಳನ್ನು ಮಧ್ಯಾಹ್ನ 1ರ ವೇಳೆಗೆ ನಗರದ ಹೊರವಲಯದ ಗಟ್ಟೂರು ಕ್ರಾಸ್ ಬಳಿ ಪೊಲೀಸರು ತಡೆದರು.
ಆದ್ರೆ ಇಷ್ಟೆಲ್ಲ ಗದ್ದಲ, ಆಕ್ರೋಶ, ಸಾವಿರಾರು ರೈತರ ಜಮಾವಣೆ ಇದ್ದರೂ ರೈತರು ಸಹನೆಯಿಂದಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
ಶಶಿಕಾಂತ ಗುರೂಜಿ ಮತ್ತು ಚೂನಪ್ಪ ಪೂಜೇರಿ ರೈತ ಹೋರಾಟದ ಮುಖ್ಯ ನಾಯಕರಾಗಿದ್ದವರು. ಇವರಿಬ್ಬರು ಮಾಡಿದ ಭಾಷಣ ಕೇಳಿದರೆ, ಅದು ಉತ್ತರ ಕರ್ನಾಟಕದ ರೈತರ ಎದೆಯೊಳಗಿನ ಕಿಚ್ಚು, ನೋವು ಮತ್ತು ಆಕ್ರೋಶವನ್ನೇ ಹೊರಹಾಕಿದಂತಿತ್ತು. ಪ್ರಹ್ಲಾದ ಜೋಶಿ ಅವರ ಎದೆಗೆ ಗುಂಡು ಹೊಡೆದ ಹಾಗೆ ನೇರವಾಗಿ, ಖಾರವಾಗಿ ಮಾತಾಡಿದರು. ಆದ್ರೂ ಇವರಿಬ್ಬರೂ ಕಾನೂನಿನ ಚೌಕಟ್ಟು ಮೀರಿ ಒಂದು ಮಾತನ್ನೂ ಆಡಲಿಲ್ಲ ಅನ್ನೋದು ಇಲ್ಲಿ ಮುಖ್ಯ.
ಈ ಕುರಿತು ರೈತ ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ರಾಮದುರ್ಗ ಅವರನ್ನು ಈ ದಿನ.ಕಾಮ್ ಮಾತನಾಡಿಸಿದಾಗ, “ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಈ ಹೋರಾಟಕ್ಕೆ ಬಂದಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರೈತರು ಸೇರಿದ್ದರೂ ನಮ್ಮ ರೈತರು ಎಲ್ಲಿಯೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣ ರೈತರ ಸಂಯಮ ಮತ್ತು ಹೋರಾಟದ ಬಗ್ಗೆ ಅವರಿಗಿದ್ದ ಬದ್ಧತೆ” ಎಂದು ಪ್ರತಿಕ್ರಿಯಿಸಿದರು.
ಅದರ ಜೊತೆಗೆ ರೈತ ನಾಯಕ ಶಶಿಕಾಂತ ಗುರೂಜಿಯವರ ಮಾತುಗಳಿಗೂ ರೈತರು ಗೌರವ ಕೊಟ್ಟಿದ್ದಾರೆ. ಗುರೂಜಿಯವರು ಏನು ಹೇಳುತ್ತಾರೋ, ಹೋರಾಟ ಯಾವ ದಿಕ್ಕಿನಲ್ಲಿ ಸಾಗಬೇಕು ಅಂತ ತಿಳಿಸುತ್ತಾರೋ, ಅದನ್ನ ಮೀರಿ ರೈತರು ಹೋಗಲಿಲ್ಲ. ನಾಯಕರು ನೀಡಿದ ಸೂಚನೆಗೆ ರೈತರು ಒಗ್ಗಟ್ಟಿನಿಂದ ಸ್ಪಂದಿಸಿದ್ದಾರೆ.
ಲಕ್ಷಾಂತರ ರೈತರು ಒಂದೇ ಕಡೆ ಸೇರಿ, ತಮ್ಮ ಬೇಡಿಕೆಗಾಗಿ ಶಾಂತಿಯುತವಾಗಿ ಹೋರಾಡಿದ್ದು ರೈತರ ಒಗ್ಗಟ್ಟಿನ ಶಕ್ತಿಯನ್ನ ತೋರಿಸಿದೆ. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಯಾವುದೇ ಸರ್ಕಾರ ಇದ್ದರೂ ರೈತರ ನ್ಯಾಯಯುತ ಬೇಡಿಕೆಗಳ ಮುಂದೆ ಮಣಿಸಬಹುದು ಎಂದು ಮಲ್ಲಿಕಾರ್ಜುನ ರಾಮದುರ್ಗ ಅವರು ಹೇಳಿದರು.
ರೈತರ ಜತೆ ಪೊಲೀಸರು ಸ್ನೇಹಯುತವಾಗಿಯೇ ಇದ್ದರು. ಹೋರಾಟಗಾರರನ್ನು ಶತ್ರುಗಳಂತೆ ನೋಡದೆ, ಕಾನೂನು-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಿದರು. ಹೋರಾಟದಲ್ಲಿ ಗದ್ದಲ, ಗೊಂದಲ ಹೆಚ್ಚಾಗದ ಹಾಗೆ ನೋಡಿಕೊಂಡರು.
ರೈತರು ಬ್ಯಾರಿಕೇಡ್‌ಗಳನ್ನು ದಾಟಿ ಸಚಿವರ ನಿವಾಸದ ಎದುರು ಸೇರಿದ್ದ ಸಂದರ್ಭದಲ್ಲೂ ಪರಿಸ್ಥಿತಿ ಕೈಮೀರದಂತೆ ಪೊಲೀಸರು ಎಚ್ಚರಿಕೆ ವಹಿಸಿದರು. ರೈತರ ಆಕ್ರೋಶವನ್ನ ಅರ್ಥ ಮಾಡಿಕೊಂಡು, ಕಾನೂನು-ಸುವ್ಯವಸ್ಥೆಯನ್ನೂ ಕಾಪಾಡಿಕೊಂಡು ನಡೆದ ಅವರ ಕಾರ್ಯವೈಖರಿ ಗಮನ ಸೆಳೆಯಿತು.

ಒಂದು ಹೋರಾಟ ಯಶಸ್ವಿಯಾಗೋದು ಕೇವಲ ಬೇಡಿಕೆಗಳನ್ನ ಕೂಗಿ ಹೇಳುವುದರಿಂದ ಅಲ್ಲ. ಹೋರಾಟಗಾರರು ತಮ್ಮ ಸಂಯಮ ಕಳೆದುಕೊಳ್ಳದೇ ಇರುವುದು, ಪೊಲೀಸರು ಕೂಡ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸುವುದು ಬಹಳ ಮುಖ್ಯ. ಹುಬ್ಬಳ್ಳಿ ಹೋರಾಟದಲ್ಲಿ ಈ ಎರಡೂ ಸಂಗತಿಗಳು ಕಾಣಿಸಿಕೊಂಡವು.
ಇಷ್ಟೆಲ್ಲ ಆದರೂ ರೈತರು ಪ್ರಹ್ಲಾದ ಜೋಶಿಯವರ ಮನೆಗೆ ನುಗ್ಗಲಿಲ್ಲ. ಯಾರನ್ನೂ ವೈಯಕ್ತಿಕವಾಗಿ ಅವಮಾನ ಮಾಡಲಿಲ್ಲ. ಕಾನೂನು ಕೈಗೆ ತಗೊಳ್ಳಲಿಲ್ಲ. ತಮ್ಮ ಆಕ್ರೋಶವನ್ನು ಪ್ರತಿಭಟನೆಯ ಮೂಲಕವೇ ವ್ಯಕ್ತಪಡಿಸಿದರು. ನಮ್ಮ ರೈತರು ಅದೆಷ್ಟು ಮುಗ್ಧರು ಅನ್ನೋದು ಅಲ್ಲಿ ಅರ್ಥ ಆಯ್ತು. ಅವರ ಮನಸ್ಸಿನಲ್ಲಿ ಎಷ್ಟೇ ನೋವು, ಕೋಪ ಇದ್ದರೂ ಕಾನೂನು ಮತ್ತು ಸಂವಿಧಾನದ ಮೇಲಿನ ಗೌರವ ಮಾತ್ರ ಕಡಿಮೆಯಾಗಲಿಲ್ಲ.
ಇದರಿಂದ ಒಂದು ಮಾತು ಮಾತ್ರ ಸ್ಪಷ್ಟವಾಗುತ್ತದೆ ಇಲ್ಲಿ ಬಂದ ಎಲ್ಲ ರೈತರು ಶಾಲಾ ಕಾಲೇಜು ಹೋಗಿರಲಿಕ್ಕಿಲ್ಲ ಆದರೆ ತಮ್ಮ ಹಕ್ಕು ಏನು, ಕಾನೂನು ಏನು, ಸಂವಿಧಾನ ಏನು ಅನ್ನೋ ಅರಿವು ರೈತರಿಗೆ ಇದೆ. ತಮ್ಮ ಹಕ್ಕಿಗಾಗಿ ಹೋರಾಡಬೇಕು, ಸರ್ಕಾರವನ್ನು ಪ್ರಶ್ನಿಸಬೇಕು ಅನ್ನೋದು ಗೊತ್ತಿದೆ. ಅದೇ ಸಮಯದಲ್ಲಿ ಕಾನೂನಿನ ಮಿತಿಯನ್ನೂ ಅವರು ಅರ್ಥ ಮಾಡಿಕೊಂಡಿದ್ದಾರೆ
ನಂತರ ಜಿಲ್ಲಾಧಿಕಾರಿ ಆರ್. ಸ್ನೇಹಲ್, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರು ರೈತ ಮುಖಂಡರಾದ ಚೂನಪ್ಪ ಪೂಜೇರಿ ಮತ್ತು ಶಶಿಕಾಂತ ಗುರೂಜಿ ಅವರೊಂದಿಗೆ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆನ್‌ಲೈನ್ ಮೂಲಕ ಸಭೆಗೆ ಹಾಜರಾದರು.
ಅಕ್ಟೋಬರ್ 10ರೊಳಗೆ ಶಾಸಕ ಎಂ.ಆರ್. ಪಾಟೀಲ ನೇತೃತ್ವದಲ್ಲಿ 30 ಮಂದಿ ರೈತರ ನಿಯೋಗ ದೆಹಲಿಗೆ ತೆರಳುವುದು, ಅಕ್ಟೋಬರ್ 15ರೊಳಗೆ ಕಬ್ಬಿನ ಕಾರ್ಖಾನೆ ಆರಂಭಿಸಬಾರದು ಎಂಬುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕುರಿತು ದೆಹಲಿಯಲ್ಲಿ ವಿಸ್ತ್ರತವಾಗಿ ಚರ್ಚೆ ನಡೆಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.
ಆದ್ರೆ ರೈತರ ಬೇಡಿಕೆಗಳ ಅಂತಿಮ ಪರಿಹಾರ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕು. ರೈತರು ಹೋರಾಟ ಮಾಡಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾತುಕತೆ ನಡೆಸಿದ್ದಾರೆ. ಈಗ ರೈತರು ಕೇಳುತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ಪರಿಹಾರ ಸಿಗಬೇಕಿದೆ.
ಒಟ್ಟಾರೆ ಹುಬ್ಬಳ್ಳಿಯ ಈ ರೈತ ಹೋರಾಟದಲ್ಲಿ ರೈತರ ಕೋಪಕ್ಕಿಂತ ಅವರ ತಾಳ್ಮೆ ಮತ್ತು ಸಹನೆಯೇ ದೊಡ್ಡದಾಗಿ ಕಾಣಿಸಿತು. ಸಾವಿರಾರು ರೈತರು ಸೇರಿ ತಮ್ಮ ಬೇಡಿಕೆಗಳನ್ನು ಗಟ್ಟಿಯಾಗಿ ಹೇಳಿದರೂ ಕಾನೂನು ಕೈಗೆ ತೆಗೆದುಕೊಳ್ಳದೆ ಹೋರಾಟ ನಡೆಸಿದರು. ಶಶಿಕಾಂತ ಗುರೂಜಿ ಮತ್ತು ಚೂನಪ್ಪ ಪೂಜೇರಿ ಅವರ ಮಾತುಗಳಿಗೆ ಗೌರವ ನೀಡಿ ರೈತರು ಸಂಯಮದಿಂದ ನಡೆದುಕೊಂಡರು. ಅದೇ ರೀತಿ ರೈತರ ಜತೆ ಸ್ನೇಹಯುತವಾಗಿ ನಡೆದುಕೊಂಡು, ಗದ್ದಲ ಮತ್ತು ಗೊಂದಲ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿಯೂ ಗಮನಾರ್ಹವಾಗಿತ್ತು.
ರೈತರ ಹೋರಾಟ ಗಟ್ಟಿಯಾಗಿತ್ತು, ಆದರೆ ತಾಳ್ಮೆ ಕಳೆದುಕೊಳ್ಳಲಿಲ್ಲ. ಪೊಲೀಸರ ಕಾರ್ಯವೈಖರಿ ಕಟ್ಟುನಿಟ್ಟಾಗಿತ್ತು, ಆದರೆ ಸ್ನೇಹಯುತವಾಗಿತ್ತು. ಇದೇ ಹುಬ್ಬಳ್ಳಿ ಹೋರಾಟದಲ್ಲಿ ಎಲ್ಲರೂ ಸ್ಮರಿಸಬೇಕಾದ ಪ್ರಮುಖ ಸಂಗತಿ.





