ಅಸ್ಸಾಂನಲ್ಲಿ ಮತದಾನದ ನಡುವೆ ಎರಡು ಸ್ಥಳಗಳಲ್ಲಿ ಚುನಾವಣೆ ಸಂಬಂಧಿತ ಹಿಂಸಾಚಾರ ನಡೆದಿದೆ. ಒಟ್ಟು 30 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇದಲ್ಲದೆ, ಬೆಳಿಗ್ಗೆ ಮತದಾನ ಪ್ರಾರಂಭವಾದ ನಂತರ ಹಲವಾರು ಮತಗಟ್ಟೆಗಳಲ್ಲಿ ಸಣ್ಣಪುಟ್ಟ ಘರ್ಷಣೆಗಳು ಸಹ ನಡೆದಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು, ಬುಧವಾರ ರಾತ್ರಿ ತಮುಲ್ಪುರ ಮತ್ತು ಶಿವಸಾಗರ್‌ನಲ್ಲಿ ಹಿಂಸಾಚಾರ ನಡೆದಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಖಿಲೇಶ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? 100 ಪ್ರಕರಣದ ಬೆದರಿಕೆ ಹಾಕಿದ ಅಸ್ಸಾಂ ಸಿಎಂ; ‘ಮಾನವ ಹಕ್ಕುಗಳ ರಕ್ಷಕರನ್ನು ಹತ್ತಿಕ್ಕುವ ಪ್ರಯತ್ನ’
“ನಿನ್ನೆ ರಾತ್ರಿ ತಮುಲ್ಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಬಗ್ಗೆ ವರದಿಯಾಗಿವೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಜನರು ಕೇಳದಿದ್ದಾಗ ಗುಂಪನ್ನು ಚದುರಿಸಲು ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ನಾಲ್ವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಶಿವಸಾಗರ್‌ನಲ್ಲಿ ಮೂರು ಮಂದಿ ಮೇಲೆ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಹಿಂಸಾಚಾರದ ಹಿಂದೆ ಬಿಜೆಪಿ ಅಭ್ಯರ್ಥಿ ಕುಶಾಲ್ ದೊವಾರಿ ಕೈವಾಡವಿದೆ ಎಂದು ರೈಜೋರ್ ದಳ ಪಕ್ಷದ ನಾಯಕ ಅಖಿಲ್ ಗೊಗೊಯ್ ಆರೋಪಿಸಿದ್ದಾರೆ. ಸಿಬ್ಸಾಗರ್ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅವರ ವಾಹನಗಳು ಸಹ ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.
ಅಸ್ಸಾಂನ 126 ಸದಸ್ಯರ ವಿಧಾನಸಭೆ ಚುನಾವಣೆ ಇಂದು ಒಂದೇ ಹಂತದಲ್ಲಿ ನಡೆದಿದೆ. ಅಸ್ಸಾಂ ಮಾತ್ರವಲ್ಲದೆ ಕೇರಳ ಮತ್ತು ಪುದುಚೆರಿಯಲ್ಲಿಯೂ ಚುನಾವಣೆ ನಡೆದಿದ್ದು ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ.




