ಬಾಬು ಜಗಜೀವನ್ ರಾಮ್ ಜಯಂತಿಗೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಆಗಮಿಸದೆ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಒಳಮೀಸಲಾತಿ ಜಾರಿಗೆ ಮಾದಿಗ ದಂಡೋರ (ಪಾವಗಡ ಶ್ರೀ ರಾಮ್ ಬಣ) ಜಿಲ್ಲಾ ಘಟಕದಿಂದ ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭನದಲ್ಲಿ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಏ.5ರಂದು ನಡೆದ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಸಚಿವರು ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದರಿಂದ ಮಾದಿಗ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿಲ್ಲ ಹಾಗೂ ರಾಷ್ಟ್ರ ನಾಯಕರ ಕಾರ್ಯಕ್ರಮಗಳಿಗೂ ಹಾಜರಾಗದಿರುವುದು ಬೇಸರದ ಸಂಗತಿಯಾಗಿದೆ. ಇದಲ್ಲದೆ, ರಾಜ್ಯದಲ್ಲಿ ಮಾದಿಗ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ, ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಏಪ್ರಿಲ್ 9 ಮತ್ತು 10ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ತಂದು, ನೇಮಕಾತಿಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಚುನಾವಣೆಯಲ್ಲಿ ವಿರೋಧ ವ್ಯಕ್ತಪಡಿಸಲಾಗುವುದು ಹಾಗೂ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಸಂಘಟನೆ ಎಚ್ಚರಿಸಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆಸ್ಪತ್ರೆಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಹೇಮರಾಜ ಅಸ್ಕಿಹಾಳ, ನರಸಿಂಹಲು ಮರ್ಚಟಾಳ್, ಉರುಕುಂದಿ ಸಿಯಾತಲಾಬ್, ಕೃಷ್ಣಮೂರ್ತಿ, ತಾಯಪ್ಪ ಗ್ರಿದಾರ್, ಡಿ.ಆಂಜನೇಯ್ಯ, ಲಕ್ಷ್ಮಣ ಕಲ್ಲೂರು, ರವಿ ಗಾರಲದಿನ್ನಿ ಸೇರಿ ಅನೇಕರಿದ್ದರು.




