2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಬೀದರ್ ಜಿಲ್ಲೆಗೆ ಒಟ್ಟಾರೆ ಶೇ 84.62ರಷ್ಟು ಫಲಿತಾಂಶ ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 17.3ರಷ್ಟು ಹೆಚ್ಚಿಗೆ ಫಲಿತಾಂಶ ಬಂದಿದೆ. ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆ 20ನೇ ಸ್ಥಾನ ಪಡೆದಿದೆ. ಹೋದ ವರ್ಷ 22ನೇ ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ ಈ ಬಾರಿ 20ನೇ ಸ್ಥಾನಕ್ಕೆ ಜಿಗಿದಿದೆ.
2024ರಲ್ಲಿ 19ನೇ ಸ್ಥಾನಕ್ಕೆ ಕುಸಿತ ಕಂಡರೂ ಶೇ 81.69 ಫಲಿತಾಂಶ ದಾಖಲಾಗುವ ಮೂಲಕ ಹೆಚ್ಚಳ ಕಂಡಿತು. 2025ರಲ್ಲಿ ಮತ್ತೆ ಕುಸಿತ ಕಂಡಿತು. ಈ ಬಾರಿ ಫಲಿತಾಂಶ, ಸ್ಥಾನ ಎರಡರಲ್ಲೂ ಸುಧಾರಣೆ ಕಂಡಿರುವುದು ಆಶಾದಾಯಕ ಬೆಳವಣಿಗೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ :
ಜಿಲ್ಲೆಯ ಚಿಟಗುಪ್ಪ ಪಟ್ಟಣದ ಸರ್ಕಾರಿ ಕನ್ಯಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಸೋನಾ ಚಂದ್ರಕಾಂತ ಶೇ 98.83ರಷ್ಟು (593) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಒಟ್ಟು 18,301 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಪಾಸಾದ ವಿದ್ಯಾರ್ಥಿಗಳು 15,487
ಶೇ.84.62, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 3,123 ವಿದ್ಯಾರ್ಥಿಗಳಲ್ಲಿ 2,090 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2,067 ವಿದ್ಯಾರ್ಥಿಗಳಲ್ಲಿ 1,583 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 76.58ರಷ್ಟು ಫಲಿತಾಂಶ ಬಂದಿದೆ. ಇನ್ನು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದವರು 13,110, ಈ ಪೈಕಿ ಉತ್ತೀರ್ಣರಾದವರು 11,814 ವಿದ್ಯಾರ್ಥಿಗಳು. ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ 90.11 ರಷ್ಟು ಬಂದಿದೆ.
ಇನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ 86.21ರಷ್ಟು ಫಲಿತಾಂಶ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 84.16 ರಷ್ಟು ಸಾಧನೆ ಮಾಡಿದ್ದಾರೆ. ಈ ಬಾರಿಯೂ ಬಾಲಕಿಯರು ಶೇ81.34ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 77.47ರಷ್ಟು ಫಲಿತಾಂಶ ಬಾಲಕರದ್ದಾಗಿದೆ.

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಹಣಮಂತ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 593 (98.83) ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾಳೆ.
ಇದನ್ನೂ ಓದಿ : ಬೀದರ್ | ಜನ-ಜಾನುವಾರುಗಳಿಗೆ ನೀರಿನ ಅಭಾವ ಆಗದಂತೆ ಮುಂಜಾಗ್ರತೆವಹಿಸಿ : ಸಚಿವ ಈಶ್ವರ ಖಂಡ್ರೆ




