ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಾತ್ರವಲ್ಲದೆ, ಚುನಾವಣಾ ಆಯೋಗ ಮತ್ತು ಬಿಜೆಪಿಯ ದುಷ್ಟ ಮೈತ್ರಿ ದೇಶವನ್ನು ಏಕಪಕ್ಷದ ಆಳ್ವಿಕೆಗೆ ತಳ್ಳಲಿದೆ- ಈ ಅಪಾಯ ತಪ್ಪಿಸಲು ಎನ್‌ಡಿಎಯೇತರ ಪಕ್ಷಗಳು ಒಗ್ಗಟ್ಟಾಗಲೇಬೇಕಿದೆ. ಎಡ, ಬಲದ ಗೊಡವೆ ಬಿಟ್ಟು ಒಂದಾಗಬೇಕಿದೆ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಚುನಾವಣಾ ಆಯೋಗ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಉತ್ತರ ಬಂಗಾಳದ ಮಯನ್‌ಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ದೀದಿ ಆರೋಪಿಸಿದ್ದಾರೆ. ಎನ್‌ಆರ್‌ಸಿ ಹೇರುವ ಮೂಲಕ ಪೌರತ್ವವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತದೆ ಎಂದೂ ಕೂಡ ಎಚ್ಚರಿಕೆ ನೀಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ತೀವ್ರವಾಗಿ ಟೀಕಿಸಿದ ಮಮತಾ, ನ್ಯಾಯಾಲಯದ ಕದವನ್ನೂ ತಟ್ಟಿದ್ದರು ಎನ್ನುವುದು ಕೂಡ ಉಲ್ಲೇಖನೀಯ.
ಇನ್ನು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಕೆಲವು ಸಮುದಾಯಗಳನ್ನು ಚುನಾವಣಾ ಪ್ರಕ್ರಿಯೆಗಳಿಂದ ಹೊರಗಿಡಲಾಗುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಅಷ್ಟಲ್ಲದೆ, ರಾಜ್‌ಬನ್ನಿಗಳ ಹೆಸರುಗಳನ್ನು ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಮಹಿಳೆಯರ ಹೆಸರುಗಳನ್ನೂ ಕೈಬಿಡಲಾಗುತ್ತಿದೆ. ಎಸ್‌ಐಆರ್‌ನಿಂದಾಗಿ ಸಾವುಗಳು ಸಂಭವಿಸಿದರೆ, ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆ ಬೈ ಎಲೆಕ್ಷನ್ | ʼಬಿಮ್ಸ್ʼ ಮೂಲಕ ಮತಬ್ಯಾಂಕ್ ಗಟ್ಟಿಗೊಳಿಸಿಕೊಂಡ್ರಾ ಕೈ ನಾಯಕರು?
‘ಚುನಾವಣಾ ಆಯೋಗ, ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂವಿಧಾನದ ನಿಯಮಗಳನ್ನು ಅನುಸರಿಸುತ್ತಿಲ್ಲ. ಮತದಾರರಲ್ಲಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಇಂದು ಮತದಾನದ ಹಕ್ಕನ್ನು ಕಸಿಯುತ್ತಾರೆ; ಎನ್‌ಆರ್‌ಸಿ ಮೂಲಕ ಪೌರತ್ವವನ್ನೂ ಕಸಿದುಕೊಳ್ಳುತ್ತಾರೆ’ ಎಂದು ದೂರಿರುವುದು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಚರ್ಚಗೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆಯನ್ನು ರಾಜಕೀಯ ವಲಯದಲ್ಲಿ ಎರಡು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ʼಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಅವರ ಆಡಳಿತದ ಮೇಲಿರುವ ವಿರೋಧಿ ಅಲೆಯಿಂದ ಅಸಹಾಯಕರಾಗಿದ್ದಾರೆ, ಹಾಗಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆʼ ಎನ್ನುವುದು ಒಂದಾದರೇ, ʼಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ದೇಶವನ್ನು ಏಕಪಕ್ಷದ ಆಳ್ವಿಕೆಗೆ ತಳ್ಳಲಿದೆ ಎಂಬ ಆತಂಕವನ್ನು ಮಮತಾ ಹೊರಹಾಕಿದ್ದಾರೆʼ ಎನ್ನುವಂತೆಯೂ ವಿಶ್ಲೇಷಣೆ ಕೇಳಿ ಬರುತ್ತಿದೆ.
ಕಾಂಗ್ರೆಸ್ ಸೇರಿದಂತೆ ಇತರೆ ಎನ್‌ಡಿಎಯೇತರ ಪಕ್ಷಗಳು ಕೂಡ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಗಳು ವಿರೋಧಿಸಿವೆ. ಮಾತ್ರವಲ್ಲದೆ, ಪ್ರಗತಿಪರ ಸಂಘಟನೆಗಳು ಕೂಡ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ನೀತಿಯನ್ನು ಖಂಡಿಸಿವೆ. ದಾಖಲೆಗಳ ನೆಪ ಹೇಳಿ ಪ್ರಜೆಗಳ ಮತದಾನದ ಹಕ್ಕನ್ನು ಜೀವಂತವಿರುವಾಗಲೇ ಕಸಿದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ಕುಂದಿಸುವುಕ್ಕೆ ಬಿಜೆಪಿ ತನ್ನ ದುಷ್ಟಬುದ್ದಿಯಿಂದ ಯತ್ನಿಸುತ್ತಲೇ ಇದ್ದು, ಈಗ ಅಧಿಕೃತವಾಗಿ ಚುನಾವಣೆ ಆಯೋಗವನ್ನೇ ಬಳಸುತ್ತಿದೆ. ಎನ್‌ಡಿಎಯೇತರ ಪಕ್ಷಗಳು ಸೈದ್ಧಾಂತಿಕ ಭಿನ್ನಮತವನ್ನು ಬಿಟ್ಟು ಒಂದಾಗಿ ಹೋರಾಡಬೇಕು ಎಂದು ಮಮತಾ ನೀಡಿದ ಹೇಳಿಕೆ ಯೋಚನಾರ್ಹ ವಿಷಯವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಎಸ್‌ಐಆರ್ ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ 3 ಕೋಟಿಯಷ್ಟು ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ ಎನ್ನುವ ವರದಿಗಳಿದ್ದು, ಚುನಾವಣಾ ಆಯೋಗದ ಮೂಲಕ ಬಿಜೆಪಿ ದ್ವೇಷ ರಾಜಕಾರಣವನ್ನು ದೇಶದ ಉದ್ದಗಲಕ್ಕೂ ಬಿತ್ತುತ್ತಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಅಸಂವಿಧಾನಿಕವಾದ ಈ ನೀತಿಯನ್ನು ತೃಣಮೂಲ ಕಾಂಗ್ರೆಸ್ ಬಲವಾಗಿ ವಿರೋಧಿಸಿದೆ.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪರಿಗಣಿಸಬೇಕಿದೆ. ಆಧಾರ್ ಕಾರ್ಡ್ ಇದ್ದವರನ್ನು ಮತಪಟ್ಟಿಯಿಂದ ಹೊರಗಿಡಬಾರದು. ಭಾರತೀಯರಲ್ಲ ಎನ್ನುವ ಅನುಮಾನಗಳು ಬಂದಲ್ಲಿ ಅದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪ್ರಕ್ರಿಯೆ ನಡೆದು ದೃಢೀಕರಣಗೊಂಡ ಬಳಿಕ ಮತ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗ ಪಾಲಿಸುತ್ತಿಲ್ಲ ಎನ್ನುವ ಆರೋಪಗಳಿವೆ. ದಾಖಲೆಗಳಿಲ್ಲದಿದ್ದಲ್ಲಿ ಸಿದ್ದಪಡಿಸಿಕೊಂಡು ಹಾಗೂ ಅಪೀಲು ಸಲ್ಲಿಸಲು ಸಮಯ ನೀಡಬೇಕು. ಅಪೀಲು ಸಲ್ಲಿಸಲು ಅವಕಾಶವನ್ನೂ ನೀಡದೆ ತರಾತುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಮುಗಿಸುತ್ತಿರುವುದು ಚುನಾವಣಾ ಭವಿಷ್ಯವನ್ನೇ ಬುಡಮೇಲು ಮಾಡುತ್ತದೆ. ಮತ್ತು ಒಗ್ಗೂಡಿ ಈ ನಡೆಯನ್ನು ವಿರೋಧಿಸಬೇಕಿರುವ ಅನಿವಾರ್ಯತೆಯನ್ನು ತಂದಿಟ್ಟಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಿದಾಗ 65 ಲಕ್ಷ ಮತದಾರರ ಹೆಸರು ಕೈಬಿಟ್ಟು ಮತದಾರರ ಕರಡು ಪಟ್ಟಿ ಪ್ರಕಟವಾದಾಗಲೇ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ನಡೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗಿದ್ದವು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕೈಬಿಟ್ಟ ಮತದಾರರ ಸಂಖ್ಯೆ 44 ಲಕ್ಷಕ್ಕೆ ಇಳಿಯಿತು ಎನ್ನುವುದು ಇಲ್ಲಿ ಉಲ್ಲೇಖನೀಯ. ಈಗಾಗಲೇ ಈ ಎಸ್ಐಆರ್ ಪ್ರಕ್ರಿಯೆ ದೇಶದ ಅರ್ಧ ಭಾಗಕ್ಕೆ ತಲುಪಿದೆ. ಅನೇಕ ಮತದಾರರ ಮೇಲೆ ಹಕ್ಕು ರದ್ದತಿಯ ತೂಗುಗತ್ತಿಯನ್ನು ಚುನಾವಣಾ ಆಯೋಗ ಇರಿಸಿದೆ. ಮತದಾರರು ತಮ್ಮ ಹಕ್ಕಿಗಾಗಿ ಹೋರಾಡುವ ಸ್ಥಿತಿ ಬಂದೊದಗಿದೆ.
ಇದನ್ನೂ ಓದಿ : ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ತರಾತುರಿ | ಕ್ಷೇತ್ರಗಳ ಮರುವಿಂಗಡನೆ ಸಂದರ್ಭದಲ್ಲೇ ಜಾರಿ?
ಮಮತಾ ಬ್ಯಾನರ್ಜಿ ಹೇಳಿರುವುದು ಚುನಾವಣಾ ಉದ್ದೇಶಕ್ಕಾಗಿ ಇರಬಹುದಾದರೂ, ಬಿಜೆಪಿಯ ಕುತಂತ್ರ ರಾಜಕಾರಣದ ಬಗೆಗಿನ ಸತ್ಯಾಂಶ ಇದರಲ್ಲಿ ಅಡಗಿದೆ. ನಿಜಕ್ಕೂ ಎನ್‌ಡಿಎಯೇತರ ಪಕ್ಷಗಳು ತಮ್ಮ ಸೈದ್ಧಾಂತಿಕ ಭಿನ್ನಮತವನ್ನು ಬಿಟ್ಟು ಒಂದಾಗಬೇಕಿರುವುದು ಚುನಾವಣೆಗಾಗಿ ಅಲ್ಲ, ಬಡವರು, ಅನಕ್ಷರಸ್ಥರ ಹಕ್ಕನ್ನು ಕಸಿಯುತ್ತಿರುವ ಹುನ್ನಾರದ ವಿರುದ್ಧ ಒಂದಾಗಬೇಕಿದೆ.
SIR ಪ್ರಕ್ರಿಯೆಯಿಂದ ಪ್ರಜಾಪ್ರಭುತ್ವ ದುರ್ಬಲ: ಎಡ-ಬಲ ಗೊಡವೆ ಬಿಟ್ಟು ಒಂದಾಗಲೇಬೇಕಿದೆ ಎಂದ ದೀದಿ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




