ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪದ ಕುರಿತು ಸಿಬಿಐ ತನಿಖೆ ಹಾಗೂ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಸಿದ್ದ ಮತ್ತೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಕಾರಣ ಇಲ್ಲಿಯೂ ವಿಚಾರಣೆ ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಮಂಜೀವ್ ಶುಕ್ಲಾ ಅವರನ್ನೊಳಗೊಂಡ ಅಲಹಾಬಾದ್ ಹೈಕೋರ್ಟ್ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ. ಈ ಹಿಂದೆ ಸೋಮವಾರವೂ ಅರ್ಜಿಯನ್ನು ವಜಾಗೊಳಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗ, ಹೈಕೋರ್ಟ್‌ನಲ್ಲಿ ಮತ್ತೆ ಪ್ರತ್ಯೇಕ ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಸಿಬಿಐ ತನಿಖೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
‘ಗಾಂಧಿವಾದಿ ಅಧಿವಕ್ತಾ ವಿಚಾರ ಮಂಚ್’ ಎಂಬ ಸಂಘಟನೆಯು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ವಂಚನೆಯ ತನಿಖೆ ನಡೆಸಬೇಕು ಎಂದು ಕೋರಿತ್ತು.
ಇನ್ನೊಂದು ಅರ್ಜಿಯಲ್ಲಿ ಅಡ್ವೊಕೇಟ್ ಮೋತಿ ಲಾಲ್ ಯಾದವ್ ಅವರು ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ನ್ಯಾಯಾಂಗ ಆಯೋಗವನ್ನು ರಚಿಸಿ ಅಕ್ರಮಗಳ ತನಿಖೆ ನಡೆಸಬೇಕು ಎಂದು ವಿನಂತಿಸಿದ್ದರು. ಈ ಎರಡೂ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪ್ರಮುಖ ಮೂರು ಅರ್ಜಿಗಳ ಜಂಟಿ ವಿಚಾರಣೆಯು ಜುಲೈ 13, ಸೋಮವಾರದಂದು ನಡೆಯಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಅರ್ಜಿದಾರರಾದ ನರೇಂದ್ರ ಕುಮಾರ್ ಗೋಸ್ವಾಮಿ, ವಕೀಲರಾದ ಅಜಯ್ ಕುಮಾರ್ ರೈ, ದಿನೇಶ್ ಕುಮಾರ್ ಯಾದವ್, ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಅವರುಗಳು ಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ಮತ್ತು ಟ್ರಸ್ಟ್‌ನ ಸಂಪೂರ್ಣ ಹಣಕಾಸಿನ ವಿಧಿವಿಜ್ಞಾನ ಆಡಿಟ್ ನಡೆಸಬೇಕು ಎಂದು ಕೋರಿದ್ದಾರೆ.




