ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್–2026) ಕಾರ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಬಿಎಲ್‌ಒ ಹಾಗೂ ಮೇಲ್ವಿಚಾರಕರನ್ನು ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಶಂಸನಾ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ-248ರಲ್ಲಿ ಎಸ್‌ಐಆರ್–2026ರ ಎನ್ಯುಮರೇಷನ್ ಫಾರಂಗಳ ವಿತರಣೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಕೇವಲ 11 ದಿನಗಳಲ್ಲಿ ಶೇ.100ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿ, ಬೀದರ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಸಾಧನೆ ದಾಖಲಿಸಿದ್ದಾರೆ.
ಜಿಲ್ಲಾಡಳಿತದ ಶ್ಲಾಘನೆ: ಅಧಿಕಾರಿಗಳ ಕರ್ತವ್ಯನಿಷ್ಠೆ, ಸಮಯಪಾಲನೆ, ಪರಿಶ್ರಮ ಮತ್ತು ಕಾರ್ಯಕ್ಷಮತೆ ಅತ್ಯಂತ ಶ್ಲಾಘನೀಯವಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಜವಾಬ್ದಾರಿ ಹಾಗೂ ಸಮರ್ಪಣಾ ಮನೋಭಾವದಿಂದ ಸಮಯೋಚಿತವಾಗಿ ಅನುಷ್ಠಾನಗೊಳಿಸಿದ ನಿಮ್ಮ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳ ಅಮೂಲ್ಯ ಸೇವೆಯನ್ನು ಮುಕ್ತಕಂಠದಿMದ ಪ್ರಶಂಸಿಸಿ, ಮುಂದಿನ ಕಾರ್ಯಗಳಿಗೂ ಶುಭ ಹಾರೈಸಿದ್ದಾರೆ.
ಈ ಅಪರೂಪದ ಸಾಧನೆಗೈದ ಕೊಹಿನೂರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ, ಬಿಎಲ್‌ಒ ಸುಮಾ ಪಾಟೀಲ, ಗ್ರಾಮ ಆಡಳಿತಾಧಿಕಾರಿಯೂ ಆದ ಬಿಎಲ್‌ಒ ಮೇಲ್ವಿಚಾರಕ ದೇವರಾಜ ಮೈದೂರು ಅವರನ್ನು ಜಿಲ್ಲಾಧಿಕಾರಿಗಳಕಚೇರಿಯಲ್ಲಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ವಿತರಣೆಗೆ ವಿಶೇಷ ಕೌಂಟರ್
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸಹಾಯಕ ಆಯುಕ್ತ ಪ್ರಕಾಶ್ ಕುದುರಿ, ತಹಶೀಲ್ದಾರ್ ದತ್ತಾತ್ರೇಯ ಗಾದಾ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸತ್ಯದೀಪ್ ಸೇರಿದಂತೆ ಚುನಾವಣಾ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.




