ಆಲ್ಟ್ ನ್ಯೂಸ್ (Alt News) ಸಹಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಮೇಲೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಲ್ಲೆ ನಡೆದಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿಗೆ ಜುಬೈರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಿಯನ್ನು ಸುಳ್ಳು ಸುದ್ದಿ ಎಂದು ಆರೋಪಿಸಿರುವ ಅವರು, ಅದನ್ನು ಹಿಂಪಡೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ಎಕ್ಷ್‌ನಲ್ಲಿ ʼಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ ಹಿಗ್ಗಾಮುಗ್ಗ ಥಳಿತ?” ಹೆಸರಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಜತೆಗೆ ವಿಡಿಯೋ ಲಿಂಕ್ ಶೇರ್ ಮಾಡಲಾಗಿತ್ತು.
ಕನ್ನಡಪ್ರಭದ ವರದಿಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಜುಬೈರ್, ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕನ್ನಡಪ್ರಭದ ಎಕ್ಸ್ ಖಾತೆಯನ್ನು ಉಲ್ಲೇಖಿಸಿ, ವರದಿಯನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜುಬೈರ್ ಅವರ ಪೋಸ್ಟ್‌ನಲ್ಲಿ, “This Kannada Channel @KannadaPrabha owned by @RajeevRC_X is running Fake News against me. If you don’t take down your fake News. I’ll take legal action against” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್‌ನಲ್ಲಿ ಮಹಿಳಾ ಮಾರ್ದನಿ: ಬೆದರಿಸುವುದು, ಕಡೆಗಣಿಸುವುದು ಇನ್ನು ಸಾಧ್ಯವಿಲ್ಲ!
ಸದ್ಯ ಲಭ್ಯವಿರುವ ವರದಿಯ ಪ್ರಕಾರ, ಮೆಟ್ರೋದಲ್ಲಿ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಘಟನೆಯ ಕುರಿತು ಅಧಿಕೃತ ದೃಢೀಕರಣ ಲಭ್ಯವಿಲ್ಲ. ಕನ್ನಡಪ್ರಭ ಪ್ರಕಟಿಸಿದ್ದ ಸುದ್ದಿಯೂ ಈಗ ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ಸ್ವತಃ ತಾವೇ ‘ಫ್ಯಾಕ್ಟ್ ಚೆಕರ್’ (Fact-checker) ಆಗಿ ಕಾರ್ಯನಿರ್ವಹಿಸುತ್ತಿರುವ ಮೊಹಮ್ಮದ್ ಜುಬೈರ್ ಅವರ ಹೆಸರಿನಲ್ಲೇ ಇಂತಹ ಅಪಪ್ರಚಾರ ಅಥವಾ ಪರಿಶೀಲಿಸದ ವಿಡಿಯೋಗಳು ವೈರಲ್ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅಧಿಕೃತ ದೃಢೀಕರಣವಿಲ್ಲದೆ ಸುದ್ದಿ ಪ್ರಸಾರ ಮಾಡುವುದರ ಪರಿಣಾಮವನ್ನು ಇದು ತೋರಿಸುತ್ತಿದೆ. ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ‘ಕ್ಲಿಕ್‌ಬೈಟ್’ (Clickbait) ಅಥವಾ ಶೀಘ್ರವಾಗಿ ಸುದ್ದಿಯನ್ನು ತಲುಪಿಸುವ ಭರಾಟೆಯಲ್ಲಿ ಮೌಲ್ಯಮಾಪನ ಮತ್ತು ಖಚಿತತೆ ಇಲ್ಲದೆ ವರದಿ ಮಾಡುವುದು ಮಾಧ್ಯಮಗಳ ವಿಶ್ವಾಸಾರ್ಹತೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ.




