ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಎಸ್‌ಐಆರ್ ರದ್ದು ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ದೆಹಲಿಯಲ್ಲಿ ಸಿಜೆಪಿ ನಡೆಸುತ್ತಿರುವ ‘ಜಂತರ್ ಮಂತರ್ 2.0’ ಪ್ರತಿಭಟನೆಯಿಂದ ಕಾಂಗ್ರೆಸ್ ದೂರ ಉಳಿದಿದೆ. ಆದಾಗ್ಯೂ, ಈ ಪ್ರತಿಭಟನೆಗೆ ಎಡಪಕ್ಷಗಳು, ಟಿಎಂಸಿ ಹಾಗೂ ಎಎಪಿ ಬೆಂಬಲ ನೀಡಿವೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಚೆನ್ನೈನಲ್ಲಿ ನಡೆಯಲಿರುವ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಸಿಜೆಪಿ ಪ್ರತಿಭಟನೆಯಿಂದ ಅಂತರ ಕಾಯ್ದುಕೊಳ್ಳಲು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಸಿಜೆಪಿ ಪ್ರತಿಭಟನೆಯಿಂದ ಕಾಂಗ್ರೆಸ್ ದೂರ ಉಳಿದಿದ್ದರೂ, ಎಡಪಕ್ಷಗಳು, ಟಿಎಂಸಿ ಹಾಗೂ ಎಎಪಿ ಬಹಿರಂಗ ಬೆಂಬಲ ಘೋಷಿಸಿವೆ. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದು, “ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ವಿಷಯವಲ್ಲ, ಇದು ದೇಶದ ಪ್ರಜಾಪ್ರಭುತ್ವದ ಹಿತದೃಷ್ಟಿಯ ಪ್ರಶ್ನೆ. ಶನಿವಾರ ಆರಂಭವಾಗುವ ಈ ಪ್ರತಿಭಟನೆಯಲ್ಲಿ ನಾನು ಮತ್ತು ನನ್ನ ಕುಟುಂಬ ಭಾಗವಹಿಸಲಿದ್ದೇವೆ, ದೇಶದ ಜನತೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್‌ಗೆ ಬರಬೇಕು” ಎಂದು ಮನವಿ ಮಾಡಿದ್ದಾರೆ.
ಇನ್ನು, ಸಿಪಿಎಂ, ಸಿಪಿಐ, ಸಿಪಿಐ(ಎಂಬಿ)ಎಲ್, ಆರ್‌ಎಸ್‌ಪಿ ಹಾಗೂ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಒಳಗೊಂಡ ಎಡಪಕ್ಷಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಶಾಂತಿಯುತವಾಗಿ ಸಭೆ ಸೇರುವುದು ಮತ್ತು ಪ್ರತಿಭಟಿಸುವುದು ನಾಗರಿಕರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿವೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮಾತನಾಡಿ, ಎಡಪಕ್ಷಗಳು ಪ್ರತಿಭಟನೆಯಲ್ಲಿ ಪೂರ್ಣ ಶಕ್ತಿಯೊಂದಿಗೆ ಭಾಗವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, “ನಾವು ಸಿಜೆಪಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಬೆಂಬಲ ಮುಂದುವರಿಸಿದ್ದೇವೆ” ಎಂದಿದ್ದಾರೆ. ಟಿಎಂಸಿ ಸಂಸದರಾದ ಸಾಕೇತ್ ಗೋಖಲೆ ಮತ್ತು ಡೆರಿಕ್ ಒಬ್ರಿಯಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಪ್ರಮುಖ ರಸ್ತೆ ತಡೆ, ಮೆಟ್ರೋ ನಿಲ್ದಾಣಗಳ ಬಂದ್ ಹಾಗೂ ರೈಲು ಸೇವೆಗಳ ರದ್ದತಿಯಂತಹ ದಮನಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ನಿರ್ಬಂಧಗಳನ್ನು ಪ್ರಶ್ನಿಸಿ ಸಿಪಿಎಂ ಮುಖಂಡ ಎಂ.ಎ. ಬೇಬಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೆ, ಟಿಎಂಸಿ ಸಂಸದ ಸಾಕೇತ್ ಗೋಖಲೆ ದೆಹಲಿ ಹೈಕೋರ್ಟ್‌ಗೆ ಪತ್ರ ಬರೆದಿದ್ದು, ‘ನ್ಯಾಯಾಲಯವೇ ಮುತುವರ್ಜಿ ವಹಿಸಿ Suo Motu ಪ್ರಕರಣ ದಾಖಲಿಸಿಕೊಂಡು, ದೆಹಲಿ ಪೊಲೀಸರ ಕ್ರಮಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಮೆಟ್ರೋ ಮತ್ತು ರೈಲುಗಳನ್ನು ಸಂಪೂರ್ಣ ಬಂದ್ ಮಾಡುವುದು ಸರಿಯಲ್ಲ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಿ” ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.



