ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವಾರ್ಡ್ ಸಂಖ್ಯೆ 23, ಭಾಗ ಸಂಖ್ಯೆ 128ರ (ಮುದಿಯಪ್ಪ ಬಡಾವಣೆ) 30ಕ್ಕೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರಂ-7 ಸಲ್ಲಿಸಿರುವುದು ಖಚಿತವಾಗಿದೆ. ಈ ಘಟನೆ ವಿರುದ್ಧ ಕಡೂರಿನ ಸಂತ್ರಸ್ತ ಮತದಾರರು ತಮ್ಮ ಮೂಲ ದಾಖಲೆಗಳೊಂದಿಗೆ ತಾಲೂಕು ಆಡಳಿತ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
“ಮೂಲತಃ ಅಕ್ಟೋಬರ್ 3 ರಂದು ಈ ಅಕ್ರಮದ ವಿಚಾರ ನಮ್ಮ ಗಮನಕ್ಕೆ ಬಂತು. ತಕ್ಷಣವೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆವು. ಅಲ್ಲಿನ ಜನರನ್ನು ಮಾತಾಡಿಸಿದಾಗ, ಅವರು ಕಳೆದ 30 ರಿಂದ 35 ವರ್ಷಗಳಿಂದ ಅದೇ ಪ್ರದೇಶದಲ್ಲೇ ನಿರಂತರವಾಗಿ ವಾಸವಾಗಿದ್ದಾರೆ ಮತ್ತು ಎಲ್ಲಿಗೂ ಸ್ಥಳಾಂತರಗೊಂಡಿಲ್ಲ ಎಂಬುದು ಸ್ಪಷ್ಟವಾಯಿತು. ಬಿಎಲ್ಓ ನೋಟಿಸ್ ನೀಡಿದ ಮೇಲೆಯೇ ತಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲು ಯತ್ನಿಸಿರುವುದು ಅವರಿಗೆ ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ಒಂದೇ ಸಮುದಾಯದವರನ್ನು ಟಾರ್ಗೆಟ್ ಮಾಡಿ ಹೆಸರು ಡಿಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಲಾಗಿದೆ ಎಂದು ಕಡೂರು ಮುನ್ನ ಈದಿನ.ಕಾಮ್ ಜೊತೆಗೆ ಮಾತನಾಡಿ ತಮ್ಮ ಅಳಲು ತೋಡಿಕೊಂಡರು.
ಫಾರಂ-7 ಎಂದರೇನು?
ಚುನಾವಣಾ ಆಯೋಗದ ನಿಯಮಗಳ ಪ್ರಕಾರ Form-7 ಅನ್ನು ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರು ಅಳಿಸುವಂತೆ ಆಕ್ಷೇಪಣೆ ಸಲ್ಲಿಸಲು ಬಳಸಬಹುದು. ಮರಣ, ಅಪ್ರಾಪ್ತ ವಯಸ್ಸು, ಶಾಶ್ವತವಾಗಿ ಸ್ಥಳಾಂತರ, ಈಗಾಗಲೇ ಮತ್ತೊಂದು ಕಡೆ ನೋಂದಣಿ ಅಥವಾ ಭಾರತೀಯ ನಾಗರಿಕನಲ್ಲದಿರುವುದು ಮುಂತಾದ ಕಾರಣಗಳನ್ನು ನಮೂದಿಸಬಹುದು. ಅರ್ಜಿದಾರನೇ ತನ್ನ ಆಕ್ಷೇಪಣೆಗೆ ಪುರಾವೆ ಒದಗಿಸುವ ಹೊಣೆಗಾರನಾಗಿರುತ್ತಾನೆ. Form-7ರ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದರೆ Representation of the People Act, 1950ರ Section 31 ಅಡಿಯಲ್ಲಿ ಶಿಕ್ಷಾರ್ಹವಾಗಬಹುದು ಎಂದು ಚುನಾವಣಾ ಆಯೋಗದ ಮಾರ್ಗಸೂಚಿ ಸ್ಪಷ್ಟಪಡಿಸುತ್ತದೆ. ಅಂದರೆ, Form-7 ಸ್ವತಃ ಅಕ್ರಮವಾದ ಅರ್ಜಿ ಅಲ್ಲ; ಆದರೆ ಸುಳ್ಳು ಮಾಹಿತಿ, ಸುಳ್ಳು ಘೋಷಣೆ ಅಥವಾ ಅರ್ಹ ಮತದಾರರನ್ನು ಗುರಿಯಾಗಿಸಿಕೊಂಡು ದುರುಪಯೋಗ ಮಾಡಿದರೆ ಅದು ಗಂಭೀರ ಕಾನೂನು ಪ್ರಶ್ನೆಗಳಿಗೆ ಕಾರಣವಾಗಬಹುದಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದ ಸಂತ್ರಸ್ತರೊಬ್ಬರು ಈದಿನ.ಕಾಮ್ ಜೊತೆ ಮಾತನಾಡಿ, “ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನದ ಹಿಂದೆ ಧರ್ಮದ್ವೇಷ ಮತ್ತು ರಾಜಕೀಯ ದುರುದ್ದೇಶವಿದೆ. ಒಂದೇ ಪ್ರದೇಶದಲ್ಲಿ ಒಂದೇ ರೀತಿಯ ಕಾರಣಗಳನ್ನು ನೀಡಿ ಹೆಚ್ಚಿನ ಸಂಖ್ಯೆಯ ಮತದಾರರ ವಿರುದ್ಧ Form-7 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಅರ್ಜಿಗಳನ್ನು ಯಾರು ಸಿದ್ಧಪಡಿಸಿದರು? ಮತದಾರರ ವೈಯಕ್ತಿಕ ವಿವರಗಳು ಹೇಗೆ ಲಭ್ಯವಾದವು? ಅರ್ಜಿಗಳನ್ನು ಯಾರು ತುಂಬಿದರು? ಸಹಿ ಮತ್ತು ಘೋಷಣೆಗಳು ನಿಜವೇ? ಅರ್ಜಿದಾರರು ನಿಜವಾಗಿಯೂ ಆ ಮತಕ್ಷೇತ್ರದ ಮತದಾರರೇ? ‘Absent/Permanently Shifted’ ಎಂಬ ಕಾರಣಕ್ಕೆ ಆಧಾರವೇನು?” ಎಂದು ಆಕ್ರೋಶ ಹೊರಗಾಕಿದರು. ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಾಗಿದೆ.

ಈ ಅಕ್ರಮದ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದನ್ನು ವಿವರಿಸಿದ ಅವರು, “ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನಾವು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಎಸ್ಪಿಯವರನ್ನು ಭೇಟಿ ಮಾಡಿ ಒತ್ತಾಯಿಸಿದೆವು. ಈ ನಡುವೆ ಸಬ್ ಇನ್ಸ್‌ಪೆಕ್ಟರ್ ಅವರು ಆರೋಪ ಎದುರಿಸುತ್ತಿರುವ ಮಾಜಿ ಬಿಜೆಪಿ ಕೌನ್ಸಿಲರ್ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ, ‘ನನಗೆ ಪಕ್ಷದಿಂದ ಫಾರಂಗಳನ್ನು ತಂದುಕೊಟ್ಟಿದ್ದರು. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲದೆ ನಾನು ಕೇವಲ ಸಹಿ ಮಾಡಿಕೊಟ್ಟಿದ್ದೆ’ ಎಂದು ಉತ್ತರ ನೀಡಿದ್ದಾರೆ. ಮೋಹನ್ ಕುಮಾರ್ ಜೊತೆಗೆ ರಾಜೇಶ್ವರಿ ಎಂಬುವವರ ಹೆಸರಿನಲ್ಲೂ ಫಾರಂ-7 ಸಲ್ಲಿಕೆಯಾಗಿದ್ದು, ಇಬ್ಬರೂ ಬಿಜೆಪಿ ಹಿನ್ನೆಲೆಯವರಾಗಿದ್ದಾರೆ” ಎಂದು ತಿಳಿಸಿದ್ದಾರೆಂದು ಎದ್ದೇಳು ಕರ್ನಾಟಕ ಹಾಗೂ SIR ವಿರೋಧಿ ಒಕ್ಕೂಟದ ತಾಲೂಕು ಮುಖಂಡ ಕಡೂರು ಮುನ್ನ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು
SIR ಬಗ್ಗೆ ಸುಳ್ಳು ಮಾಹಿತಿ ನೀಡಿ ಫಾರಂ-7 ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಅರ್ಹ ಮತದಾರರ ಹಕ್ಕನ್ನು ಕಸಿಯುವ ಇಂತಹ ಕೃತ್ಯಗಳ ವಿರುದ್ಧ ಪಾರದರ್ಶಕ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮತದ ಹಕ್ಕು ಕಳೆದುಕೊಂಡಿರುವ ಮತದಾರರು ಒತ್ತಾಯಿಸಿದ್ದಾರೆ.





