ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮುಂಬೈನ ‘ಆಗಸ್ಟ್ ಕ್ರಾಂತಿ ಮೈದಾನ’ದಲ್ಲಿ ಶಾಂತಿಯುತ ಧರಣಿ ನಡೆಸಲು ಹೊರಟಿದ್ದ ಮಹಾತ್ಮ ಗಾಂಧಿ ಮರಿಮೊಮ್ಮಗ, ‘ಹಮ್ ಭಾರತ್ ಕೆ ಲೋಗ್’ ಸಂಘಟನೆ ಅಧ್ಯಕ್ಷ ತುಷಾರ್ ಗಾಂಧಿ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಾಹ್ನ 3:30ಕ್ಕೆ ನಿಗದಿಯಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ತುಷಾರ್ ಗಾಂಧಿ ಅವರನ್ನು ಬಾಂದ್ರಾದಲ್ಲಿ ತಡೆದ ಪೊಲೀಸರು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ.
ತಮ್ಮ ಬಂಧನದ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ತುಷಾರ್ ಗಾಂಧಿ, ತಮ್ಮನ್ನು ಬಂಧಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.
ತುಷಾರ್ ಗಾಂಧಿ ಮಾತ್ರವಲ್ಲದೆ, ಅವರ ಸಂಘಟನೆಯ ಉಪಾಧ್ಯಕ್ಷರನ್ನು ಅಂಧೇರಿಯಲ್ಲಿ ವಶಕ್ಕೆ ಪಡೆದು ಎಂಐಡಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ತುಷಾರ್ ಗಾಂಧಿ ಬಂಧನದ ಕುರಿತು ವಿವರಣೆ ನೀಡಿರುವ ಮುಂಬೈ ಪೊಲೀಸರು, “ಯಾರನ್ನೂ ಬಂಧಿಸಿಲ್ಲ, ಬದಲಾಗಿ ಕೇವಲ ಮುನ್ನೆಚ್ಚರಿಕೆಯಾಗಿ ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದ್ದಾರೆ.



