ರಾಜ್ಯ ಸರ್ಕಾರ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಪೀಟರ್ ಚಿಟಗುಪ್ಪಾ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಸೇರಿದಂತೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಜನಸಾಮಾನ್ಯರು ಪರದಾಡುತ್ತಿದ್ದಾರೆ. ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯಲ್ಲಿ ರೈತರು ಹಾಗೂ ಗ್ರಾಮೀಣ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಪ್ರಯಾಣ ದರ ಏರಿಕೆಯಿಂದ ಕೂಲಿ ಕಾರ್ಮಿಕರು, ರೈತರು, ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿನಿತ್ಯ ಪ್ರಯಾಣಿಸಲು ಹೆಚ್ಚಿನ ಹಣ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜನಸಾಮಾನ್ಯರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕರವೇ ಒತ್ತಾಯಿಸಿದೆ.

ಮನವಿ ಸಲ್ಲಿಸಿದ 15 ದಿನಗಳೊಳಗೆ ಹೆಚ್ಚಿಸಿರುವ ಬಸ್ ಪ್ರಯಾಣ ದರವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಬಸ್ ಪ್ರಯಾಣ, ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಕರವೇ ಜಿಲ್ಲಾ ಸಂಚಾಲಕ ಬಸವರಾಜ ನಂದಗಾಂವ, ರೈತ ಘಟಕದ ಅಧ್ಯಕ್ಷ ವೀರಶೆಟ್ಟಿ ಗೊಸಪುರ್, ರೈತ ಘಟಕದ ಮುಖಂಡ ಧನರಾಜ್ ಗೊಸಪುರ್, ಜಿಲ್ಲಾ ಕಾರ್ಯದರ್ಶಿ ಮೊಜೆಸ್ ಅಣದೂರ, ಜಿಲ್ಲಾ ಸಹಕಾರ್ಯದರ್ಶಿಗಳಾದ ಮೈಕಲ್ ಕಡ್ಯಾಳ ಹಾಗೂ ಅಶೋಕ ಕಡ್ಯಾಳ, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೋರ, ಯುವ ಘಟಕದ ಅಧ್ಯಕ್ಷ ಚಂದ್ರಕಾಂತ್ ಪೊಳ್, ಬೀದರ್ ದಕ್ಷಿಣ ಕ್ಷೇತ್ರದ ತಾಲೂಕು ಅಧ್ಯಕ್ಷ ನಿಲೇಶ ರಾಠೋಡ, ಉಪಾಧ್ಯಕ್ಷ ಧನರಾಜ ಚಿಟವಾಡಿ, ಕಾರ್ಯದರ್ಶಿ ಶಿವಕುಮಾರ ಮಾಮುಡಗಿ, ಸಹಕಾರ್ಯದರ್ಶಿ ರಾಜಗೊಂಡ ಆಣದೂರೆ, ಕಮಠಾಣಾ ಗ್ರಾಮ ಘಟಕದ ಅಧ್ಯಕ್ಷ ಅಭಿಷೇಕ ಕಮಠಾಣಾ, ಆಕಾಶ್ ಕಡ್ಯಾಳ್, ಶಾದ್ರಾಕ್ ನೆಳಗಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಔರಾದ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಘೂಳೆ, ರವೀಂದ್ರ ರೆಡ್ಡಿ




