ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ(ಎಫ್‌ಎಸ್‌ಡಿ) ವಿವಿಧ ಹೊಟೆಲ್ ಆಹಾರ ತಯಾರಿಕಾ ಘಟಕಗಳ ಮೇಲೆ ದಿಡೀರ್ ದಾಳಿ ನಡೆಸಿದ್ದು, ವಿವಿಧ ಸಂಸ್ಥೆಗಳಿಗೆ ನೊಟೀಸ್ ನೀಡಿ ಎಚ್ಚರಿಸಿದರೆ ಒಂದು ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಸೀಲ್ ಹಾಕಲಾಗಿದೆ.
ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಇವರ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ ಸುರತ್ಕಲ್ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಸುರತ್ಕಲ್ ನಲ್ಲಿರುವ ಸೂರಜ್ ಇಂಟರ್ನ್ಯಾಷನಲ್ ಹೋಟೆಲ್, ಮೋರ್ ರಿಟೇಲ್ ಮಳಿಗೆ, ಬ್ಲಿಂಕ್ ಇಟ್ ಆನ್ಲೈನ್ ಪ್ಲಾಟ್ಫಾರ್ಮ್,ಮಕ್ ಡೊನಾಲ್ಡ್ಶ್ ರೆಸ್ಟೋರೆಂಟ್, ಎನ್‌ಐಟಿಕೆ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ಗಳಿಗೆ ಆಹಾರ ಸರಬರಾಜು ಮಾಡುವ ಕಿಚನ್ ಗಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿದ್ದು, ಸೂರಜ್ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದಿರುವುದರಿಂದ ಏಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಮೆಕ್ ಡೊನಾಲ್ಡ್ ನಲ್ಲಿ ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಕೊರತೆ ಇರುವುದರಿಂದ ಪ್ರಕರಣ ದಾಖಲಿಸಲಾಗಿದೆ.
“ಸೂರಜ್ ಇಂಟರ್ನ್ಯಾಷನಲ್ ಹೋಟೆಲ್ ಮತ್ತು ಮಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿಂದ ಆಹಾರ ಮಾದರಿಯ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದೇ ಸಂದರ್ಭ ಬೈಕಂಪಾಡಿ ಇಂಡಸ್ಟ್ರಿ ಯಲ್ ಏರಿಯಾದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕವೊಂದರಲ್ಲಿ ಹೆಗ್ಗಣಗಳು ಓಡಾಡುತ್ತಿದ್ದು ಹಾಗೂ ಅನೈರ್ಮಲ್ಯದಿಂದ ಕೂಡಿದ್ದು ತಯಾರಿಕಾ ಘಟಕಕ್ಕೆ ಸೀಲ್ ಮಾಡಿ ಸೀಜ್ ಮಾಡಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




