ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಯನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯ ಇಂಡಿಯಾ ಗೇಟ್ ಆವರಣದಲ್ಲಿ ಧರಣಿ ನಡೆಸುತ್ತಿದ್ದ ಅಂಕಿತಾ ಭಂಡಾರಿ ಅವರ ಪೋಷಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕೃತ್ಯವನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮೋದಿ ಸರ್ಕಾರದ ಹೇಡಿತನ ಮತ್ತು ಸಂವೇದನಾರಹಿತ ಕ್ರೌರ್ಯದ ಪರಮಾವಧಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಕಿತಾ ಪೋಷಕರ ಬಂಧನವನ್ನು ಖಂಡಿಸಿ ಟ್ವೀಟ್ ಮಾಡಿರುವ ಖರ್ಗೆ, “ತಮ್ಮ ಮಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಪೋಷಕರಿಗೆ ನ್ಯಾಯ ಒದಗಿಸುವ ಬದಲು ಪೊಲೀಸರ ಮೂಲಕ ಬಂಧಿಸಿರುವುದು ಅತ್ಯಂತ ನಾಚಿಕೆಗೇಡಿನ ಮತ್ತು ಖಂಡನೀಯ” ಎಂದಿದ್ದಾರೆ.
“ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕರೊಬ್ಬರನ್ನು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡಿ ಪುರಸ್ಕರಿಸಲಾಗುತ್ತಿದೆ. ಆದರೆ, ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಸಂತ್ರಸ್ತೆಯ ಹೆತ್ತವರನ್ನು ಪೊಲೀಸರಿಂದ ಬಂಧಿಸಲಾಗುತ್ತಿದೆ. ಅಂಕಿತಾ ಭಂಡಾರಿ ಅವರಿಗೆ ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸಲಿದೆ” ಎಂದು ಅವರು ದೃಢವಾಗಿ ಹೇಳಿದ್ದಾರೆ.
ಇಂಡಿಯಾ ಗೇಟ್ ಬಳಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಅಂಕಿತಾ ಭಂಡಾರಿ ಅವರ ತಂದೆ ಮತ್ತು ತಾಯಿಯನ್ನು ಇಂದು (ಗುರುವಾರ), ಮುಂಜಾನೆ ಸುಮಾರು 4 ಗಂಟೆಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಅವರನ್ನು ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಇಮ್ರಾನ್ ಪ್ರತಾಪ್ಗಢಿ, ಜೋತಿಮಣಿ ಸೇರಿದಂತೆ ಹಲವು ನಾಯಕರು ಪೊಲೀಸ್ ಠಾಣೆಗೆ ಧಾವಿಸಿ, ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದು, ಬಳಿಕ, ಪೋಷಕರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬೋಟ್ ಕ್ಲಬ್ನಿಂದ ಜಂತರ್ ಮಂತರ್ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?
ಅಂಕಿತಾ ಕೊಲೆ ಪ್ರಕರಣದಲ್ಲಿ ‘ವಿಐಪಿ’ ವ್ಯಕ್ತಿಯೊಬ್ಬರ ಪಾತ್ರವಿದೆ ಎಂಬ ಆರೋಪವಿದ್ದು, ಆ ಬಗ್ಗೆ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ದುಷ್ಯಂತ್ ಗೌತಮ್ ಅವರ ರಾಜ್ಯಪಾಲರ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ಪೋಷಕರು ಪಟ್ಟುಹಿಡಿದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಬುಧವಾರ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದ್ದರು.
ಉತ್ತರಾಖಂಡದ ರಿಷಿಕೇಶದ ರೆಸಾರ್ಟ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿ ಅವರನ್ನು 2022ರ ಸೆಪ್ಟೆಂಬರ್ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಆದಾಗ್ಯೂ, ಪ್ರಕರಣದಲ್ಲಿ ‘ವಿಐಪಿ’ ವ್ಯಕ್ತಿಯೊಬ್ಬರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಆ ಬಗ್ಗೆ ಸರಿಯಾಗಿ ತನಿಖೆ ನಡೆದಿಲ್ಲ ಎಂದು ಆರೋಪಿಸಿ ಪೋಷಕರು ಹೋರಾಟ ಮುಂದುವರಿಸಿದ್ದಾರೆ.




