ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಗೆ ಹಿಂದುಳಿದ ವರ್ಗದ ಮುಸ್ಲಿಂ ಸ್ಥಾನಮಾನ ನೀಡಿ ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರಿದ್ದ ನ್ಯಾಯಪೀಠವು ವಜಾಗೊಳಿಸಿದೆ.
ತೀರ್ಪಿನ ಪ್ರಮುಖಾಂಶವನ್ನು ಓದಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ, “ಒಬ್ಬ ವ್ಯಕ್ತಿಯು ಇಸ್ಲಾಂಗೆ ಮತಾಂತರಗೊಂಡ ಮಾತ್ರಕ್ಕೆ ರಾಜ್ಯದ ಏಳು ಅಧಿಸೂಚಿತ ಹಿಂದುಳಿದ ಮುಸ್ಲಿಂ ಸಮುದಾಯಗಳ ಸದಸ್ಯನಾಗುವುದಿಲ್ಲ. ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿ ಅಥವಾ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಇಸ್ಲಾಂ ಧರ್ಮಕ್ಕೆ ಸ್ವಯಂಚಾಲಿತವಾಗಿ ವರ್ಗಾಯಿಸಲು ಸಾಧ್ಯವಿಲ್ಲ. ಅಲ್ಲದೆ, ಯಾವುದೇ ಖಾಸಗಿ ಧಾರ್ಮಿಕ ಸಂಸ್ಥೆಯು ಇಂತಹ ಶಾಸನಬದ್ಧ ಮೀಸಲಾತಿ ಹಕ್ಕನ್ನು ನಿರ್ಧರಿಸುವಂತಿಲ್ಲ” ಎಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ ಹಾಗೂ ಡಿನೋಟಿಫೈಡ್ ಸಮುದಾಯಗಳಿಂದ ಇಸ್ಲಾಂಗೆ ಮತಾಂತರಗೊಂಡವರನ್ನು ‘ಹಿಂದುಳಿದ ವರ್ಗದ ಮುಸ್ಲಿಮರು’ ಎಂದು ಪರಿಗಣಿಸಲು ತಮಿಳುನಾಡು ಸರ್ಕಾರ 2024ರ ಮಾರ್ಚ್ 9ರಂದು ಆದೇಶ ಹೊರಡಿಸಿತ್ತು. ಆದರೆ, ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ.ಬಿ. ಬಾಲಾಜಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಇದನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿ, ಮತಾಂತರಗೊಂಡ ವ್ಯಕ್ತಿ ಕೇವಲ ಮುಸ್ಲಿಂ ಆಗಿರುತ್ತಾನೆಯೇ ಹೊರತು ಮೀಸಲಾತಿಗಾಗಿ ನಿರ್ದಿಷ್ಟ ಒಳಪಂಗಡದ ಸದಸ್ಯತ್ವ ಕೋರುವಂತಿಲ್ಲ ಎಂದಿತ್ತು.
ತೂತ್ತುಕುಡಿ ಜಿಲ್ಲೆಯ ಪರಮಶಿವಂ ಎಂಬುವವರು 2015ರಲ್ಲಿ ಇಸ್ಲಾಂಗೆ ಮತಾಂತರಗೊಂಡು ಸಮೀರ್ ಅಹ್ಮದ್ ಎಂದು ಹೆಸರು ಬದಲಿಸಿಕೊಂಡಿದ್ದರು. ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ‘ಮುಸ್ಲಿಂ ಲೆಬ್ಬೈ’ ಜಾತಿ ಪ್ರಮಾಣಪತ್ರ ಕೋರಿ ಇವರು ಸಲ್ಲಿಸಿದ್ದ ಅರ್ಜಿಯನ್ನು ತಹಶೀಲ್ದಾರ್ ತಿರಸ್ಕರಿಸಿದ್ದರು. ವಿಚಾರಣೆ ವೇಳೆ, ಮತಾಂತರಕ್ಕೂ ಮುನ್ನ ಇದ್ದ ಮೀಸಲಾತಿ ಮುಂದುವರಿಸುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
ಸರ್ಕಾರದ ವಾದ ತಿರಸ್ಕರಿಸಿದ್ದ ಹೈಕೋರ್ಟ್, 1951ರ ‘ಜಿ. ಮೈಕೆಲ್ ವಿರುದ್ಧ ಎಸ್. ವೆಂಕಟೇಶ್ವರನ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿತ್ತು. ಮುಸ್ಲಿಂ ಸಮಾಜದಲ್ಲಿ ರಾವುತರ್, ಮರಕ್ಕಾಯರ್ ಅಥವಾ ದಖನಿ ಪಂಗಡಗಳ ಸದಸ್ಯತ್ವವು ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ ಹೊರತು ಮತಾಂತರದಿಂದಲ್ಲ. ಕೇವಲ ಮೀಸಲಾತಿ ಉಳಿಸಿಕೊಡುವ ಉದ್ದೇಶದಿಂದ ವಿವಿಧ ಜಾತಿಗಳಿಂದ ಮತಾಂತರಗೊಂಡವರನ್ನು ಒಂದೇ ಗುಂಪಿಗೆ ಸೇರಿಸಿರುವುದು ಏಕಪಕ್ಷೀಯ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
ಸರ್ಕಾರದ ಆದೇಶವು ಅಸಾಂವಿಧಾನಿಕ ಮಾತ್ರವಲ್ಲದೆ ‘ಇಸ್ಲಾಂ ವಿರೋಧಿ’ಯೂ ಆಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇಸ್ಲಾಂ ಧರ್ಮವು ಸಮಾನತೆಯ ತತ್ವದ ಮೇಲೆ ನಿಂತಿದ್ದು, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಜಾತಿ ವ್ಯವಸ್ಥೆಯಿಂದ ಹೊರಬಂದು ಸಮಾನತೆಗಾಗಿ ಮತಾಂತರಗೊಂಡ ನಂತರವೂ, ಇಸ್ಲಾಂನಲ್ಲಿ ಮೇಲು-ಕೀಳು ವರ್ಗೀಕರಣ ಕೇಳುವುದು ಕುರಾನ್ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಈಗ ಕಾಯಂಗೊಳಿಸಿದೆ.




