ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು.
ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳವಾಗಿ ರೂಪುಗೊಂಡ ಇತಿಹಾಸದ ಹಿಂದೆ 1988ರಲ್ಲಿ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ನಡೆದ ಬೃಹತ್ ರೈತ ಹೋರಾಟದ ಮಹತ್ವದ ಪಾತ್ರವಿದೆ. ಅಂದು ಸುಮಾರು ಐದು ಲಕ್ಷ ರೈತರು ದೆಹಲಿಯ ಬೋಟ್ ಕ್ಲಬ್ ಪ್ರದೇಶವನ್ನು ಆಕ್ರಮಿಸಿಕೊಂಡು ನಡೆಸಿದ ಹೋರಾಟವು ಕೇಂದ್ರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆ ಪ್ರತಿಭಟನೆಯ ನಂತರ ರಾಜಧಾನಿಯ ಪ್ರತಿಭಟನಾ ಸ್ಥಳಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸುವ ಪ್ರಕ್ರಿಯೆ ಆರಂಭವಾಯಿತು. ಅಂತಿಮವಾಗಿ 1993ರ ವೇಳೆಗೆ ಜಂತರ್ ಮಂತರ್ ಪ್ರತಿಭಟನೆಗಳ ಪ್ರಮುಖ ತಾಣವಾಗಿ ಹೊರಹೊಮ್ಮಿತು.
ಜಂತರ್ ಮಂತರ್‌ಗೆ ಮುನ್ನ ಹೋರಾಟದ ತಾಣವಾಗಿತ್ತು ಬೋಟ್ ಕ್ಲಬ್
ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು.
ಸಂಸತ್ ಭವನ, ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್‌ನಂತಹ ಅಧಿಕಾರ ಕೇಂದ್ರಗಳ ಸನಿಹವಿರುವುದು ಬೋಟ್ ಕ್ಲಬ್ ವಿಶೇಷ. ಲಕ್ಷಾಂತರ ಜನರು ಸೇರಿ ತಮ್ಮ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅವಕಾಶ ಇಲ್ಲಿತ್ತು.
1988ರ ರೈತ ಹೋರಾಟ: ದೆಹಲಿಯನ್ನೇ ಬೆಚ್ಚಿಬೀಳಿಸಿದ ಮಹೇಂದ್ರ ಸಿಂಗ್ ಟಿಕಾಯತ್. ಆಗ ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು.
ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ 1988ರ ಅಕ್ಟೋಬರ್ 25ರಿಂದ ನಡೆದ ಬೃಹತ್ ರೈತ ಹೋರಾಟವು ಬೋಟ್ ಕ್ಲಬ್‌ನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ದಾಖಲಾಯಿತು.
ಉತ್ತರ ಪ್ರದೇಶದ ರೈತ ನಾಯಕ ಟಿಕಾಯತ್ ನೇತೃತ್ವದಲ್ಲಿ ಸುಮಾರು ಐದು ಲಕ್ಷ ರೈತರು ದೆಹಲಿಗೆ ಲಗ್ಗೆ ಹಾಕಿದ್ದರು. ಟ್ರ್ಯಾಕ್ಟರ್‌ಗಳು, ಎತ್ತಿನಗಾಡಿಗಳು, ಜಾನುವಾರುಗಳು ಹಾಗೂ ಆಹಾರ ಸಾಮಗ್ರಿಗಳೊಂದಿಗೆ ಬಂದ ರೈತರು ಬೋಟ್ ಕ್ಲಬ್ ಹಾಗೂ ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡುಬಿಟ್ಟರು.ಅಲ್ಲಿಯೇ ಅಡುಗೆ ಮಾಡಿ ಉಂಡರು. ಒಂದು ವಾರ ಕಾಲ ರೈತರು ರಾಜಧಾನಿಯ ಕೇಂದ್ರ ಭಾಗದಲ್ಲಿ ನೆಲೆಸಿ ಹೋರಾಟ ನಡೆಸಿದರು.
ರೈತರ ಪ್ರಮುಖ ಬೇಡಿಕೆಗಳಲ್ಲಿ ಕೃಷಿ ಸಾಲಮನ್ನಾ, ವಿದ್ಯುತ್ ಶುಲ್ಕ ಕಡಿತ, ಕಬ್ಬಿಗೆ ಉತ್ತಮ ಬೆಲೆ ಮತ್ತು ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೇರಿದ್ದವು.
ಹೋರಾಟದ ಅಂತ್ಯದಲ್ಲಿ ಸರ್ಕಾರದಿಂದ ಕೆಲವು ಬೇಡಿಕೆಗಳ ಕುರಿತು ಭರವಸೆ ದೊರೆತ ಬಳಿಕ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಈ ಘಟನೆ ದೇಶದ ರೈತ ಚಳವಳಿಗಳ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಬೋಟ್ ಕ್ಲಬ್‌ನಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧ ಜಾರಿ ಆದದ್ದು ಯಾವಾಗ ಮತ್ತು ಯಾಕೆ?
1988ರ ಬೃಹತ್ ರೈತ ಪ್ರತಿಭಟನೆಯು ಆಡಳಿತದ ಮುಂದೆ ಹೊಸ ಪ್ರಶ್ನೆಯನ್ನು ತಂದಿಟ್ಟಿತು: ರಾಜಧಾನಿಯ ಅತ್ಯಂತ ಪ್ರಮುಖ ಅಧಿಕಾರ ಕೇಂದ್ರಗಳ ಪಕ್ಕದಲ್ಲೇ ಲಕ್ಷಾಂತರ ಜನರು ದಿನಗಟ್ಟಲೆ ಬೀಡುಬಿಟ್ಟರೆ ಭದ್ರತೆ, ಸಂಚಾರ ಮತ್ತು ಆಡಳಿತವನ್ನು ಹೇಗೆ ನಿರ್ವಹಿಸುವುದು?
ಆನಂತರ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ದೇಶದ ರಾಜಕೀಯ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಬೋಟ್ ಕ್ಲಬ್‌ನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸುವುದಕ್ಕೆ ನಿರ್ಬಂಧಗಳನ್ನು ಹೇರಿತು.
1988ರ ರೈತ ಹೋರಾಟ, ನಂತರದ ರಾಜಕೀಯ ಬೆಳವಣಿಗೆಗಳು ಮತ್ತು ಭದ್ರತಾ ಆತಂಕಗಳು ಒಟ್ಟಾಗಿ ಬೋಟ್ ಕ್ಲಬ್‌ನಿಂದ ಪ್ರತಿಭಟನಾ ಸ್ಥಳವನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಹಿನ್ನೆಲೆಯಾದವು.
1993: ಜಂತರ್ ಮಂತರ್ ಪ್ರತಿಭಟನೆಗಳ ಹೊಸ ಕೇಂದ್ರ
ದೆಹಲಿಯ ಜಂತರ್ ಮಂತರ್ ಮೂಲತಃ 18ನೇ ಶತಮಾನದಲ್ಲಿ ಮಹಾರಾಜ ಎರಡನೆಯ ಸವಾಯಿ ಜೈ ಸಿಂಗ್ ನಿರ್ಮಿಸಿದ ಖಗೋಳ ವೀಕ್ಷಣಾಲಯ. ಜಂತರ್ ಮಂತರ್ ನ ಪದಶಃ ಅರ್ಥ ‘ಯಂತ್ರ ಮಂತ್ರ’. 1993ರ ವೇಳೆಗೆ ಅದರ ಪಕ್ಕದ ರಸ್ತೆಗಳು ಸಂಧಿಸುವ ಸ್ಥಳ ಪ್ರತಿಭಟನೆಯ ತಾಣವಾಗಿ ರೂಪುಗೊಂಡಿತು.
ಸಂಸತ್ತು ಮತ್ತು ಕೇಂದ್ರ ಸರ್ಕಾರಿ ಸಚಿವಾಲಯಗಳ ಸಮೀಪದಲ್ಲಿದ್ದ ಕಾರಣ ಪ್ರತಿಭಟನಾಕಾರರ ಬೇಡಿಕೆಗಳು ಸರ್ಕಾರ ಮತ್ತು ಮಾಧ್ಯಮಗಳ ಗಮನವನ್ನು ಸೆಳೆಯಬಹುದಿತ್ತು. ಆದರೆ ಬೋಟ್ ಕ್ಲಬ್‌ನಂತೆ ಲಕ್ಷಾಂತರ ಜನ ಒಂದೇ ಕಡೆ ಸೇರುವಷ್ಟು ಜಾಗ ಜಂತರ್ ಮಂತರ್ ಪಕ್ಕದಲ್ಲಿ ಇಲ್ಲ. ಪ್ರಮುಖ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ಸೀಮಿತವಾಗಿರುವ ಕಾರಣ ಜನಸಂದಣಿಯನ್ನು ನಿಯಂತ್ರಿಸುವುದು ಪೊಲೀಸರಿಗೆ ಸುಲಭವಿತ್ತು.
ನಿಗದಿತ ಪ್ರತಿಭಟನಾ ಸ್ಥಳವೆಂದು ಘೋಷಿಸುವ ಪ್ರತ್ಯೇಕ ಸುಗ್ರೀವಾಜ್ಞೆ ಅಥವಾ ಅಧಿಕೃತ ಘೋಷಣೆಯೇನೂ ಆಗಿರಲಿಲ್ಲ. ಆದರೂ ಕಾಲಕ್ರಮೇಣ ರೂಢಿಯ ಮೂಲಕ ಅದು ದೆಹಲಿಯ ಪ್ರಮುಖ ಧರಣಿ ಸ್ಥಳವಾಗಿ ಸ್ಥಿರಗೊಂಡಿತ್ತು.
ಮೂವತ್ತು ವರ್ಷಗಳ ಕಾಲ ಜನಪರ ಹೋರಾಟಗಳಿಗೆ ಸಾಕ್ಷಿ
1993ರ ನಂತರ ಜಂತರ್ ಮಂತರ್ ದೇಶದ ನಾನಾ ಭಾಗಗಳಿಂದ ದೆಹಲಿಗೆ ಬಂದ ಅನೇಕ ಸಂಘಟನೆಗಳು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಪ್ರತಿಭಟನೆಗಳ ಪ್ರಧಾನ ವೇದಿಕೆ ಎನಿಸಿತು.
2011ರಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹ, 2012ರ ನಿರ್ಭಯಾ ಪ್ರಕರಣದ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಗಳು, 2017ರ ತಮಿಳುನಾಡು ರೈತರ ಸುದೀರ್ಘ ಧರಣಿ, 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಹಾಗೂ 2023ರ ಮಹಿಳಾ ಕುಸ್ತಿಪಟುಗಳ ಹೋರಾಟ ಜಂತರ್ ಮಂತರ್‌ಗೆ ರಾಷ್ಟ್ರೀಯ ಮಹತ್ವವನ್ನು ನೀಡಿದವು.
2017ರಲ್ಲಿ ನಿಷೇಧ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ
ಸ್ಥಳೀಯ ನಿವಾಸಿಗಳ ಶಬ್ದಮಾಲಿನ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2017ರ ಅಕ್ಟೋಬರ್‌ನಲ್ಲಿ ನಿರ್ದೇಶಿಸಿತು.
ಆದರೆ 2018ರ ಜುಲೈ 23ರಂದು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.
ಶಾಂತಿಯುತ ಪ್ರತಿಭಟನೆಯು ಸಂವಿಧಾನದ 19(1)(a) ಮತ್ತು 19(1)(b) ವಿಧಿಗಳ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕು ಎಂಬುದನ್ನು ನ್ಯಾಯಾಲಯ ಒತ್ತಿ ಹೇಳಿತು. ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಮಂಜಸ ನಿಯಂತ್ರಣಗಳನ್ನು ವಿಧಿಸಬಹುದಾದರೂ ಸಂಪೂರ್ಣ ನಿಷೇಧ ಸಮರ್ಥನೀಯವಲ್ಲ ಎಂದು ಸಾರಿತು.
ಅಕ್ಟೋಬರ್ 12, 2026: ಮತ್ತೊಂದು ಮೈಲಿಗಲ್ಲು
ಇದೀಗ ಜಂತರ್ ಮಂತರ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ದೆಹಲಿ ಪೊಲೀಸರು ಜಂತರ್ ಮಂತರ್‌ಗೆ ನೀಡಲಾಗಿದ್ದ ನಿಗದಿತ ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ರದ್ದುಗೊಳಿಸಿರುವುದಾಗಿ, ಇದೇ ಅಕ್ಟೋಬರ್ 12ರಂದು ಪ್ರಕಟಿಸಿದ್ದಾರೆ. ಬದಲಿಗೆ ರಾಮಲೀಲಾ ಮೈದಾನ, ಉತ್ತರ ದೆಹಲಿಯ ಬುರಾಡಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪ್ರತಿಭಟನೆಗಳಿಗೆ ಗುರುತಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಪ್ರತಿಭಟನಾ ಸ್ಥಳಗಳನ್ನು ಬದಲಿಸುವುದರಿಂದ ಭದ್ರತೆ ಮತ್ತು ಜನಸಂದಣಿ ನಿರ್ವಹಣೆ ಸುಲಭವಾಗುತ್ತದೆ ಎಂಬುದು ಆಡಳಿತಾತ್ಮಕ ವಾದ. ಆದರೆ ಅಧಿಕಾರ ಕೇಂದ್ರಗಳಿಂದ ಪ್ರತಿಭಟನಾಕಾರರನ್ನು ದೂರ ತಳ್ಳುವುದರಿಂದ ಅವರ ಬೇಡಿಕೆಗಳ ಸಾರ್ವಜನಿಕ ಮತ್ತು ರಾಜಕೀಯ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿದೆ ಎಂಬುದು ನಾಗರಿಕ ಹಕ್ಕುಗಳ ಹೋರಾಟಗಾರರು ಎತ್ತಿರುವ ತಕರಾರು.
ಈ ಲೇಖನ ಓದಿದ್ದೀರಾ?: ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ
1988- ಟಿಕಾಯತ್ ನೇತೃತ್ವದಲ್ಲಿ ಸುಮಾರು ಐದು ಲಕ್ಷ ರೈತರ ಬೋಟ್ ಕ್ಲಬ್ ಪ್ರತಿಭಟನೆ. 1990ರ ಆರಂಭ- ಬೋಟ್ ಕ್ಲಬ್‌ನಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧಗಳು. 1993- ಪ್ರಮುಖ ಪ್ರತಿಭಟನಾ ಸ್ಥಳವಾಗಿ ಹೊರಹೊಮ್ಮಿದ ಜಂತರ್ ಮಂತರ್. 2017- ಜಂತರ್ ಮಂತರ್ ಪ್ರತಿಭಟನೆಗಳಿಗೆ ಹಸಿರು ನ್ಯಾಯಮಂಡಳಿ ನಿಷೇಧ. 2018- ಸಂಪೂರ್ಣ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ. 2026-ಜಂತರ್ ಮಂತರ್ ಗೆ ಪ್ರತಿಭಟನಾ ಸ್ಥಳದ ಸ್ಥಾನಮಾನ ರದ್ದು
ದೆಹಲಿಯ ಪ್ರತಿಭಟನಾ ಸ್ಥಳಗಳು ಕೇವಲ ಭೌಗೋಳಿಕ ಅನುಕೂಲದಿಂದ ಬದಲಾಗಿಲ್ಲ. ಜನರ ಹೋರಾಟದ ಶಕ್ತಿ, ಆಡಳಿತದ ಭದ್ರತಾ ಅಗತ್ಯಗಳು ಮತ್ತು ಸಾರ್ವಜನಿಕವಾಗಿ ಭಿನ್ನಮತ ವ್ಯಕ್ತಪಡಿಸುವ ಹಕ್ಕಿನ ನಡುವಿನ ಸಂಘರ್ಷವೂ ಈ ಬದಲಾವಣೆಗಳಿಗೆ ಕಾರಣವಾದೆ ಎಂಬುದು ಈ ಕಾಲಮಾನದಲ್ಲಿ ಗಮನಿಸಬೇಕಾದ ಅಂಶ.
1988ರಲ್ಲಿ ರೈತರು ಬೋಟ್ ಕ್ಲಬ್‌ನಲ್ಲಿ ನಡೆಸಿದ, ಬೃಹತ್ ಪ್ರತಿಭಟನೆ ರಾಜಧಾನಿಯ ಪ್ರತಿಭಟನಾ ಭೂಗೋಳವನ್ನೇ ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿತು. ಆ ಬಳಿಕ ಜಂತರ್ ಮಂತರ್ ಜನರ ಹಕ್ಕೊತ್ತಾಯಗಳ ಪ್ರಮುಖ ವಿಳಾಸವಾಯಿತು. ಈಗ, 2026ರಲ್ಲಿ ಅದರ ಸ್ಥಾನಮಾನ ಬದಲಾಗುತ್ತಿರುವುದು ಇದೇ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಪ್ರತಿಭಟನೆಗೆ ಸ್ಥಳ ನಿಗದಿಪಡಿಸುವುದು ಆಡಳಿತದ ಜವಾಬ್ದಾರಿಯಾಗಬಹುದು. ಆದರೆ ಪ್ರತಿಭಟನೆಯ ಧ್ವನಿ ಅಧಿಕಾರದಲ್ಲಿರುವವರ ಕಿವಿಗಳಿಗೆ ಕೇಳುವಷ್ಟು, ಕಣ್ಣುಗಳಿಗೆ ಕಾಣುವಷ್ಟು ಸಮೀಪದಲ್ಲಿರಬೇಕೇ ಬೇಡವೇ ಎಂಬುದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಮಹತ್ವದ ಪ್ರಶ್ನೆ.



