ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಸಂದರ್ಭದಲ್ಲಿ ಸಾವಿರಾರು ಹೋರಾಟಗಾರರು, ವಿಪಕ್ಷ ನಾಯಕರು, ನಾಗರಿಕರು, ವಕೀಲರು, ಪತ್ರಕರ್ತರನ್ನು ದೆಹಲಿ ಪೊಲೀಸರು ಸಾಮೂಹಿಕವಾಗಿ ವಶಕ್ಕೆ ಪಡೆದಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (OHCHR) ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ಬೆಳವಣಿಗೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ.
ದೆಹಲಿಯಲ್ಲಿ ನಡೆದ ಪೊಲೀಸ್ ದಮನಕಾರಿ ಕ್ರಮ ಮತ್ತು ಸಾವಿರಾರು ಜನರ ಬಂಧನವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಕಟುವಾಗಿ ಖಂಡಿಸಿದೆ. ಶಾಂತಿಯುತವಾಗಿ ಸಭೆ ಸೇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು ಎಂದು ಆಗ್ರಹಿಸಿರುವ ಯುಎನ್ ಸಂಸ್ಥೆ, ವಶಕ್ಕೆ ಪಡೆದಿರುವ ಎಲ್ಲರನ್ನೂ ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕಾಕ್ರೋಚ್‌ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?
ಜತೆಗೆ, ಕಾನೂನು ಜಾರಿ ಸಂಸ್ಥೆಗಳು ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ತಕ್ಕಂತೆ ಸಂಯಮ ತೋರಬೇಕು ಎಂದು ತಾಕೀತು ಮಾಡಿದೆ. ವಿಶ್ವಸಂಸ್ಥೆಯಲ್ಲದೆ, ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿದೇಶಿ ಮಾಧ್ಯಮಗಳೂ ಸಹ ಭಾರತದ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳ ಕುಸಿತದ ಬಗ್ಗೆ ಧ್ವನಿ ಎತ್ತಿವೆ.
ಇದೇ ವೇಳೆ, ದೇಶದ ಒಳಗೆ ಪ್ರಮುಖ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಸೇರಿದಂತೆ ವಿವಿಧ ನಾಯಕರು, ಭಾರತದಲ್ಲಿ ಪ್ರಸ್ತುತ ಅತಿರೇಕದ ಬಂಧನಗಳು ನಡೆಯುತ್ತಿದ್ದು ಪರಿಸ್ಥಿತಿಯು “ಅಘೋಷಿತ ತುರ್ತು ಪರಿಸ್ಥಿತಿ” ಮತ್ತು ಸರ್ವಾಧಿಕಾರ ಧೋರಣೆಯನ್ನು ಹೋಲುತ್ತಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಆದರೆ ವಿಶ್ವಸಂಸ್ಥೆ ಮತ್ತು ಜಾಗತಿಕ ಮಟ್ಟದಿಂದ ಬಂದಿರುವ ಆಕ್ಷೇಪಗಳಿಗೆ ಭಾರತ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಹೇಳಿಕೆಯು “ಸಂಪೂರ್ಣವಾಗಿ ತಪ್ಪುದಾರಿಗೆಳೆಯುವಂತಿದ್ದು, ಇದು ಭಾರತದ ಆಂತರಿಕ ವಿಚಾರಗಳಲ್ಲಿ ಅನಗತ್ಯ ಹಸ್ತಕ್ಷೇಪವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೊಂಡಿದೆ.




