18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿದರೆ ₹25 ಸಾವಿರ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಲ್ಕಿ ಉಪವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಾಲನಾ ಪರವಾನಗಿ ಇಲ್ಲದೆ, ವಾಹನಗಳ ಸೂಕ್ತ ದಾಖಲೆಗಳನ್ನು ಹೊಂದಿರದೆ ಹಾಗೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದೆ ಯುವಕ-ಯುವತಿಯರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸಿ, ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಲಕರು ತಮ್ಮ ಮಕ್ಕಳಿಗೆ ವಾಹನ ನೀಡುವ ಮುನ್ನ ಸಂಚಾರ ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು. ಮಕ್ಕಳ ವಯಸ್ಸು ಮತ್ತು ಕಾನೂನು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಲು ಅವಕಾಶ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
“ಕೆಲ ವಾಹನ ಸವಾರರು ರಸ್ತೆಯ ಮೇಲೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೆಲ ಯುವಕರು ಸೈಲೆನ್ಸರ್ ಇಲ್ಲದೆ ಕರ್ಕಶ ಶಬ್ದ ಮಾಡುತ್ತಾ, ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ರ‍್ಯಾಶ್ ರೈಡಿಂಗ್ ಹಾಗೂ ಟ್ರಿಪಲ್ ರೈಡಿಂಗ್ ಮಾಡುವವರ ವಿರುದ್ಧವೂ ನಿಯಮಾನುಸಾರ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ವಾಹನಗಳ ಹಾಗೂ ಜೀವದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಮುದಾಯ ಶೌಚಾಲಯ | ಕೋಟಿ ಹಣ ಖರ್ಚಾದರೂ ಮುಗಿಯದ ಕಾಮಗಾರಿ, ತೆರೆಯದ ಬಾಗಿಲು!




