ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಮುಗಿದಿವೆ. ಈ ನಡುವೆ, ಬಾರ್ಪೇಟಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ ‘ತಾಂತ್ರಿಕ ದೋಷ’ವನ್ನು ಉಲ್ಲೇಖಿಸಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ‘ಯಾವುದೋ ಒಂದು ಹಂತದಲ್ಲಿ ತಪ್ಪಾಗಿದೆ’ ಎಂಬ ಕಾರಣಕ್ಕೆ,ನಾಮಪತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದಿರುವ ಕಾಂಗ್ರೆಸ್, ಚುನಾವಣಾ ಅಧಿಕಾರಿಗಳ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಮಹಾನಂದ ಸರ್ಕಾರ್ ಅವರ ನಾಮಪತ್ರದಲ್ಲಿ ‘ಫಾರ್ಮ್ ಎ’ ಮೇಲೆ ಅಧಿಕೃತ ಪಕ್ಷದ ನಾಯಕನ ಸಹಿ ಇಲ್ಲದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಜೀತೇಂದ್ರ ಸಿಂಗ್, “ಯಾವುದೋ ಒಂದು ಹಂತದಲ್ಲಿ ತಪ್ಪಾಗಿದೆ. ಹೆಚ್ಚುವರಿ ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ, ಅಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದವು” ಎಂದಿದ್ದಾರೆ.
ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಚುನಾವಣಾ ಆಯೋಗದ ನಿಯಮಗಳು ಅವಕಾಶ ನೀಡುತ್ತವೆ. ಸುಪ್ರೀಂ ಕೋರ್ಟ್ ತೀರ್ಪುಗಳು ಸಹ ಇದನ್ನೇ ಎತ್ತಿಹಿಡಿದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ಪರಿಶೀಲನೆಯ ವೇಳೆ ನಾವು ಸರಿಪಡಿಸಿದ ಅರ್ಜಿಗಳನ್ನು ಸಲ್ಲಿಸಿದ್ದೆವು. ಆದರೆ ಚುನಾವಣಾ ಆಯೋಗವು ಬಿಜೆಪಿ ‘ಕಾರ್ಯಕರ್ತ’ನಂತೆ ವರ್ತಿಸಿ ನಾಮಪತ್ರವನ್ನು ತಿರಸ್ಕರಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಇದರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ.ಅಗತ್ಯ ಬಿದ್ದರೆ ಚುನಾವಣೆಯನ್ನು ರದ್ದುಗೊಳಿಸುವಂತೆ ಕೋರಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಸರ್ಕಾರ್ ಅವರ ನಾಮಪತ್ರ ತಿರಸ್ಕೃತಗೊಂಡ ನಂತರ, ಬಾರ್ಪೇಟಾ ಕ್ಷೇತ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಅಸೋಂ ಗಣ ಪರಿಷತ್ತಿನ ದೀಪಕ್ ಕುಮಾರ್ ದಾಸ್ ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು ಎಂಬುದು ಗಮನಾರ್ಹ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.



