ತಮಿಳುನಾಡು ವಿಧಾನಸಭೆ ಚುನಾವಣೆಗೆ ಟಿವಿಕೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಟಿವಿಕೆ ಮುಖ್ಯಸ್ಥ ವಿಜಯ್ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿರಪಳ್ಳಿ ಪೂರ್ವದಲ್ಲಿ ವಿಜಯ್ ಸ್ಪರ್ಧಿಸಲಿದ್ದಾರೆ.
ಟಿ ನಗರದಲ್ಲಿ ಪ್ರಧಾನ ಕಾರ್ಯದರ್ಶಿ ಎನ್ ಆನಂದ್, ಮೈಲಾಪುರದಲ್ಲಿ ಖಜಾಂಚಿ ವೆಂಕಟರಾಮನ್ ಮತ್ತು ವಿಲ್ಲಿವಕ್ಕಂನಲ್ಲಿ ಚುನಾವಣಾ ಪ್ರಚಾರ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಸ್ಪರ್ಧಿಸಲಿದ್ದಾರೆ. ಉಪ ಪ್ರಧಾನ ಕಾರ್ಯದರ್ಶಿಗಳಾದ ಸಿಟಿಆರ್ ನಿರ್ಮಲ್ ಕುಮಾರ್ ಮತ್ತು ರಾಜ್ ಮೋಹನ್ ಕ್ರಮವಾಗಿ ತಿರುಪ್ಪರಾಂಕುಂದ್ರಂ ಮತ್ತು ಎಗ್ಮೋರ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು ಚುನಾವಣೆ | ಶಶಿಕಲಾ ಮತ್ತು ರಾಮದಾಸ್ ಮೈತ್ರಿ
ಟಿವಿಕೆಗೆ ಹೊಸದಾಗ ಸೇರ್ಪಡೆಗೊಂಡ ಎಐಎಡಿಎಂಕೆ ನಾಯಕ ಕೆಎ ಸೆಂಗೊಟ್ಟೈಯನ್ ಗೋಬಿಚೆಟ್ಟಿಪಾಳಯಂನಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಪಕ್ಷದ ಪ್ರಚಾರ ಕಾರ್ಯದರ್ಶಿ ಕೆ.ಜಿ. ಅರುಣ್‌ರಾಜ್ ಅವರನ್ನು ತಿರುಚೆಂಗೋಡ್‌ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಟಿವಿಕೆ ಅಧಿಕಾರಕ್ಕೆ ಬಂದರೆ 29 ವರ್ಷ ಮೇಲ್ಪಟ್ಟ ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರೂ.ಗಳ ನೆರವು ನೀಡಲಾಗುವುದು ಎಂದೂ ವಿಜಯ್ ಘೋಷಿಸಿದ್ದಾರೆ. ಯುವಕರಿಗೆ ಭರವಸೆಗಳನ್ನು ನೀಡಿದ ವಿಜಯ್ ಇದನ್ನು ‘ಗ್ಯಾರಂಟಿ’ ಎಂದು ಬಣ್ಣಿಸಿದರು. ಮಾದಕ ದ್ರವ್ಯ ಮುಕ್ತ ತಮಿಳುನಾಡು ಮಾಡಲಾಗುವುದು. 12ನೇ ತರಗತಿಯಿಂದ ಪಿಎಚ್‌ಡಿವರೆಗೆ 20 ಲಕ್ಷ ರೂ.ಗಳವರೆಗೆ ಮೇಲಾಧಾರ-ಮುಕ್ತ ಸಾಲ ಖಾತರಿಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲೇ ಭರವಸೆ ನೀಡಿದರು.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ.




