ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಟಿಎಂಸಿಯ ಆಂತರಿಕ ಸಮರ ಮುಂದುವರೆದಿದೆ. ಇದೀಗ, ಪಕ್ಷದ ಬಂಡಾಯ ಬಣ ಹೊಸ ರಾಜಕೀಯ ದಾಳ ಉರುಳಿಸಿದೆ. ಮುಂಬರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದರೆ, ಅವರ ವಿರುದ್ಧ ತಮ್ಮ ಬಣ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಬಂಡಾಯ ನಾಯಕರು ಘೋಷಿಸಿದ್ದಾರೆ.
ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೆಜಿನಗರ್ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಶನಿವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಂಡಾಯ ಬಣದ ನಾಯಕ ರಿತಬ್ರತ ಬ್ಯಾನರ್ಜಿ, “ಮಮತಾ ಬ್ಯಾನರ್ಜಿ ಅವರು ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಬೇಕು ಎಂಬುದು ನಮ್ಮ ಆಶಯ. ಅವರು ನಂದಿಗ್ರಾಮದಿಂದ ಸ್ಪರ್ಧಿಸಿದರೆ ನಾವು ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ. ಅವರು ಗೆದ್ದು ಬರಲಿ, ನಂದಿಗ್ರಾಮ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳಿದ್ದಾರೆ.
ಮೇಲ್ನೋಟಕ್ಕೆ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಸೂಚಿಸಿದಂತೆ ಕಂಡರೂ, ಬಂಡಾಯ ನಾಯಕರ ಮಾತುಗಳಲ್ಲಿ ತೀವ್ರ ವ್ಯಂಗ್ಯ ಎದ್ದು ಕಾಣುತ್ತಿದೆ. “ಮಮತಾ ಬ್ಯಾನರ್ಜಿ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ನಂದಿಗ್ರಾಮದಿಂದ ಎಂದಿಗೂ ಗೆದ್ದಿಲ್ಲ. ಆದರೆ, ಉಪಚುನಾವಣೆಯಲ್ಲಿ ಗೆಲ್ಲಬಹುದು. ತಮ್ಮದೇ ಕ್ಷೇತ್ರದಲ್ಲಿ, ತಮ್ಮದೇ ಮತಗಟ್ಟೆಯಲ್ಲಿ ಅವರು ಸೋತಿರುವುದನ್ನು ನೋಡುವುದು ಚೆನ್ನಾಗಿ ಕಾಣುವುದಿಲ್ಲ” ಎಂದು ರಿತಬ್ರತ ಚುಚ್ಚಿದ್ದಾರೆ.
ಪಕ್ಷದ ಇತ್ತೀಚಿನ ಚುನಾವಣಾ ಹಿನ್ನಡೆಗೆ ಮಮತಾ ಅವರ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಏಕಪಕ್ಷೀಯ ನಿರ್ಧಾರಗಳೇ ಕಾರಣ ಎಂದು ಬಂಡಾಯ ಶಾಸಕರು ಬಹಿರಂಗವಾಗಿಯೇ ಆರೋಪಿಸುತ್ತಿದ್ದಾರೆ. ತಾವು ಮಮತಾ ವಿರುದ್ಧವಿಲ್ಲ, ಬದಲಾಗಿ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಸಮರ ಸಾರಿದ್ದೇವೆ ಎಂದು ಬಂಡಾಯ ಶಾಸಕ ಅಖ್ರುಝ್ಝಮಾನ್ ಹೇಳಿಕೊಂಡಿದ್ದಾರೆ.
2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಶಕಗಳ ಎಡಪಂಥೀಯರ ಆಡಳಿತವನ್ನು ಕೊನೆಗಾಣಿಸಲು ನಂದಿಗ್ರಾಮನ ಕೃಷಿ ಭೂಮಿ ಸ್ವಾಧೀನ ವಿರೋಧಿ ಹೋರಾಟವೇ ಮಮತಾಗೆ ಪ್ರಮುಖ ಅಸ್ತ್ರವಾಗಿತ್ತು. 2011ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ನಂದಿಗ್ರಾಮದಲ್ಲಿ ತಮ್ಮ ಅತ್ಯಾಪ್ತನಾಗಿದ್ದ ಸುವೇಂದು ಅಧಿಕಾರಿವನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬಂದಿದ್ದರು. ಅಂದಿನಿಂದ ಇಂದಿನವರೆಗೂ ನಂದಿಗ್ರಾಮ ಸುವೇಂದು ಅವರ ಭದ್ರಕೋಟೆಯಾಗಿದೆ. ಆದರೆ, 2020ರಲ್ಲಿ ಸುವೇಂದು ಅಧಿಕಾರಿ ಟಿಎಂಸಿ ತೊರೆದು, ಬಿಜೆಪಿ ಸೇರಿದಾಗ, 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ವಿರುದ್ಧ ಮಮತಾ ಸ್ಪರ್ಧಿಸಿದ್ದರು. ಆದರೆ, ಸೋಲುಂಡರು. ಆದಾಗ್ಯೂ, ಆ ಚುನಾವಣೆಯಲ್ಲಿ ಟಿಎಂಸಿ ಮರಳಿ ಅಧಿಕಾರಕ್ಕೆ ಬಂದ ಹಿನ್ನೆಲೆ, ಮಮತಾ ಅವರು ತಮ್ಮ ಭದ್ರಕೋಟೆ ಭವಾನಿಪುರ ಉಪಚುನಾವಣೆಯಲ್ಲಿ ಗೆದ್ದು ಮಮತಾ ಮುಖ್ಯಮಂತ್ರಿಯಾಗಿದ್ದರು.
ಆದರೆ, 2026ರ ಚುನಾವಣೆಯಲ್ಲಿ ಭವಾನಿಪುರದಲ್ಲಿ ಮಮತಾ ವಿರುದ್ಧ ಸುವೇಂದು ಸ್ಪರ್ಧಿಸಿ ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ, ಅವರು ನಂದಿಗ್ರಾಮ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.




