ಮಾಧ್ಯಮಗಳ ನಿಜವಾದ ಮಾಲಿಕರು ಪ್ರಜಾಪ್ರಭುತ್ವದಲ್ಲಿ ಇರುವ ಜನರು. ಮಾಧ್ಯಮಗಳು ಆಡಳಿತ ಪಕ್ಷದ ಪರವಾಗಿಯೂ ಇರಬಾರದು, ವಿರೋಧ ಪಕ್ಷದ ಪರವಾಗಿಯೂ ಇರಬಾರದು. ಮಾಧ್ಯಮಗಳು ಮಧ್ಯದಲ್ಲಿ ನಿಂತು ಸೆಕ್ಯುಲರ್ ಆಗಿ ಜನರ ಪರವಾಗಿ ಇರಬೇಕು ಎಂದು ದಿ ಹಿಂದೂ ಪತ್ರಿಕೆಯ ವಿಶೇಷ ವರದಿಗಾರ ಹೃಷಿಕೇಶ ದೇಸಾಯಿ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದ ಶ್ರೀಮತಿ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಈ ದಿನ.ಕಾಮ್ ಸಹಯೋಗದಲ್ಲಿ ನಡೆದ ‘ಸಾಮಾಜಿಕ ಬದಲಾವಣೆಯಲ್ಲಿ ಮಾಧ್ಯಮಗಳ ಪಾತ್ರ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಮಾತನಾಡಿದರು.
ಆಡಳಿತ ಪಕ್ಷದವರು ಮಾಧ್ಯಮಗಳು ನಮ್ಮ ಪರವಾಗಿ ಇರಬೇಕು ಎನ್ನುತ್ತಾರೆ. ವಿರೋಧ ಪಕ್ಷದವರು ಕೂಡ ಮಾಧ್ಯಮಗಳು ನಮ್ಮ ಪರವಾಗಿ ಇರಬೇಕು ಎನ್ನುತ್ತಾರೆ. ಆದರೆ ಮಾಧ್ಯಮಗಳು ಎಂದರೆ ಮಧ್ಯದಲ್ಲಿ ಇರಬೇಕು. ಸೆಕ್ಯುಲರ್ ಆಗಿ ಇರಬೇಕು. ಮಾಧ್ಯಮಗಳ ನಿಜವಾದ ಮಾಲಿಕರು ಪ್ರಜಾಪ್ರಭುತ್ವದಲ್ಲಿರುವ ಜನರು. ಆದ್ದರಿಂದ ಮಾಧ್ಯಮಗಳು ಜನರ ಪರವಾಗಿ ಇರಬೇಕು ಎಂದರು.
ಮಾಧ್ಯಮಗಳ ಮೂಲ ಕೆಲಸ ಸತ್ಯವನ್ನು ಹೇಳುವುದು. ಸತ್ಯವನ್ನು ಹೇಳಲು ಯಾವಾಗ ಸಾಧ್ಯವಾಗುತ್ತದೆ ಎಂದರೆ ನಾವು ನಿರ್ಭಯವಾಗಿ ಇದ್ದಾಗ ಮಾತ್ರ ಸಾಧ್ಯ. ನಾವು ಸೈದ್ಧಾಂತಿಕವಾಗಿ ಇದ್ದಾಗ ಮಾತ್ರ ಸತ್ಯವನ್ನು ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದಿನ ಯುವಕರಿಗೆ ಹಿರಿಯರು ಮೊಬೈಲ್ ನೋಡಬೇಡಿ ಎಂದು ಹೇಳುತ್ತಾರೆ. ಆದರೆ ಅವರ ಮಾತು ಕೇಳಬೇಡಿ. ಟೆಕ್ನಾಲಜಿಯಲ್ಲಿ ಯಾವುದೇ ದೋಷವಿಲ್ಲ. ಅದನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದರು.
ಜಗತ್ತಿನ ಗಮನ ಸೆಳೆದ ಜೆನ್-ಜಿ ಹೋರಾಟದಲ್ಲಿ ಗೋದಿ ಮಾಧ್ಯಮಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಅಂತರ್ಜಾಲ ಬಂದ್ ಮಾಡಿದರು. ಆದರೆ ಜೆನ್-ಜಿ ಯುವಕರು ಅಲ್ಲಿಂದ ದೂರ ಹೋಗಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದರು. ಉಕ್ರೇನ್ನಲ್ಲಿ ಬಾಂಬ್ ದಾಳಿಯನ್ನು ಬಿಬಿಸಿ ನ್ಯೂಸ್ ಅವರು ಮೊಬೈಲ್ನಲ್ಲಿ ವಿಡಿಯೋ ಮಾಡಿ ಪ್ರಸಾರ ಮಾಡಿದರು ಎಂದು ಉದಾಹರಣೆ ನೀಡಿದರು.
ಸುದ್ದಿಗಳು ಎಂದರೆ ಏನು ಎಂಬುದನ್ನು ವಿವರಿಸಿದ ಹೃಷಿಕೇಶ ದೇಸಾಯಿ, ನೀವು ಸಣ್ಣ ಮಕ್ಕಳು ಇದ್ದಾಗ ಪಕ್ಕದ ಮನೆಗೆ ಹೋಗಿ ಅಲ್ಲಿ ಅವರು ಏನು ಉಪಹಾರ ಮಾಡಿದ್ದಾರೆ ಎಂದು ಕೇಳುತ್ತಿದ್ದಿರಿ. ನಂತರ ಅದನ್ನು ಬಂದು ನಿಮ್ಮ ತಾಯಿಗೆ ಹೇಳುತ್ತಿದ್ದಿರಿ. ಇದೇ ಸುದ್ದಿ ಎಂದರೆ ಕುತೂಹಲದ ಸ್ಥಳಕ್ಕೆ ಹೋಗುವುದು, ಅಲ್ಲಿ ನಡೆದಿರುವುದನ್ನು ಬಂದು ತಿಳಿಸುವುದೇ ಸುದ್ದಿ ಎಂದು ಹೇಳಿದರು.
ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸುದ್ದಿ ಬರೆಯಬೇಕು
ಸರ್ಕಾರ ಬಜೆಟ್ ಮಂಡನೆಯಾದ ನಂತರದ ದಿನ ಪತ್ರಿಕೆಯಲ್ಲಿ ಬಜೆಟ್ ವಿಷಯ ಬರುತ್ತದೆ. ಆದರೆ ಆ ಪೇಪರ್ ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂಬುದು ಮುಖ್ಯ. ಸರ್ಕಾರಿ ಅಧಿಕಾರಿಗಳು ತೆರಿಗೆ ಹೆಚ್ಚು ಕಡಿಮೆಯಾಗಿದೆಯಾ ಎಂದು ನೋಡುತ್ತಾರೆ. ಮನೆ ನಡೆಸುವ ಹೆಣ್ಣು ಮಕ್ಕಳು ಯಾವುದು ಏರಿಕೆಯಾಗಿದೆ ಎಂಬುದನ್ನು ನೋಡುತ್ತಾರೆ. ವ್ಯಾಪಾರಸ್ಥರು ಜಿಎಸ್ಟಿ ನೋಡುತ್ತಾರೆ.
ಹೀಗಾಗಿ ಸಂಪೂರ್ಣವಾಗಿ ಬಜೆಟ್ ಅರ್ಥವಾಗುವ ಹಾಗೆ ಬರೆಯಬೇಕಾದದ್ದು ಪತ್ರಕರ್ತರ ಜವಾಬ್ದಾರಿ. ಸಾಮಾನ್ಯ ಜನರಿಗೆ ಅರ್ಥವಾಗದ ಭಾಷೆಯಲ್ಲಿ ಬರೆಯುವುದನ್ನು ಹುಟ್ಟು ಹಾಕಿದವರು ಪತ್ರಿಕೆಯವರು. ಆದ್ದರಿಂದ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಬರೆಯಬೇಕು ಎಂದು ಹೇಳಿದರು.
ಹಿರಿಯರ ಆಶೀರ್ವಾದದಿಂದ ನಾವು ರಾಜಕೀಯಕ್ಕೆ ಬಂದಿದ್ದೆವೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರದೀಪ ಪಟ್ಟಣ ಅವರು, ನಿಮ್ಮ ಹಿರಿಯರು ನಮ್ಮ ತಂದೆ-ತಾಯಿಯನ್ನು ಶಾಸಕರನ್ನಾಗಿ ಮಾಡಿದ್ದಾರೆ. ನಿಮ್ಮ ಹಿರಿಯರ ಆಶೀರ್ವಾದದಿಂದ ನಾವು ಬೆಂಗಳೂರಿನಲ್ಲಿ ಓದಿದ್ದೇವೆ ಎಂದರು.
ನಮ್ಮ ಸಹೋದರ ಅಶೋಕ ಪಟ್ಟಣ ಅವರಿಗೆ 2004ರಲ್ಲಿ ಚಾಣರಾಜಪೇಟೆಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತ್ತು. ನಮ್ಮ ತಂದೆ-ತಾಯಿಯವರು ನಮ್ಮ ರಾಮದುರ್ಗ ಉದ್ಧಾರ ಆಗಬೇಕು ಎಂಬ ಕಾರಣಕ್ಕಾಗಿ ರಾಮದುರ್ಗ ಟಿಕೆಟ್ ಕೊಡಿಸಿದರು. ನಮ್ಮ ರಾಮದುರ್ಗ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವ ಈ ದಿನ.ಕಾಮ್
ಕಾರ್ಯಕ್ರಮವನ್ನು ಉದ್ದೇಶಿಸಿ ಈ ದಿನ.ಕಾಮ್ ಓದುಗರ ಪ್ರತಿನಿಧಿ ರಾಜಶೇಖರ ಶೆಲವಡಿ ಅವರು ಮಾತನಾಡಿ, ವಿಶ್ವವಿದ್ಯಾಲಯಗಳ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಾಧ್ಯಮ ಈ ದಿನ.ಕಾಮ್. ಈ ಮಾಧ್ಯಮ ಸಾಮಾಜಿಕ ಜವಾಬ್ದಾರಿ ಕೆಲಸ ಮಾಡುತ್ತಿದೆ ಎಂದರು.
ಈ ದಿನ.ಕಾಮ್ ಮಾಧ್ಯಮದ ವಿಶೇಷ ಸಂಚಿಕೆಯಲ್ಲಿ ಮಹಾದೇವ ಪಟ್ಟಣ ಅವರು ಏಕೀಕರಣದಲ್ಲಿ ಭಾಗಿಯಾದ ವಿಚಾರಗಳು ಇವೆ. ಅದನ್ನು ವಿದ್ಯಾರ್ಥಿಗಳು ಓದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಿನ್ಸಿಪಾಲರು ಮಾತನಾಡಿ, ಎಲ್ಲರೂ ಪ್ರಜ್ಞಾವಂತರಾಗಿ, ಎಲ್ಲರೂ ಟೆಕ್ನಾಲಜಿಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಪದವಿ ಕಾಲೇಜಿನ ಉಪನ್ಯಾಸಕರಾದ ಡಾ. ಎ.ಬಿ. ವಗ್ಗರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಭಾಷಣ ಮಾಡಿದರು. ರಂಗಭೂಮಿ ನಿರ್ದೇಶಕರಾದ ಕಲ್ಲಪ್ಪ ಪೂಜೇರ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಎಸ್.ಜಿ. ಚಿಕ್ಕನರಗುಂದ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕರು ಭಾಗವಹಿಸಿದ್ದರು.




