ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮುಂದಿನ ಅವಧಿಗೂ ಅಧಿಕಾರಕ್ಕೆ ಮರಳಲಿದೆ. ಏಪ್ರಿಲ್ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ‘ವೋಟ್ ಟ್ರ್ಯಾಕರ್’ ಸಮೀಕ್ಷೆ ಹೇಳಿದೆ.
‘ವೋಟ್ ಟ್ರ್ಯಾಕರ್’ ಚುನಾವಣಾ ಪೂರ್ವ ಸಮೀಕ್ಷೆಯನ್ನು ‘ವೋಟ್‌ವೈಬ್’ ನಡೆಸಿದ್ದು, ‘ಸಿಎನ್ಎನ್-ನ್ಯೂಸ್ 18’ ಬಿಡುಗಡೆ ಮಾಡಿದೆ. ಸಮೀಕ್ಷೆ ಪ್ರಕಾರ, ಕೇವಲ ಸ್ಥಾನಗಳಲ್ಲಷ್ಟೇ ಅಲ್ಲದೆ, ಮತ ಹಂಚಿಕೆಯಲ್ಲೂ ಟಿಎಂಸಿ ಸ್ಪಷ್ಟ ಮುನ್ನಡೆ ಸಾಧಿಸಿಲಿದೆ. ರಾಜ್ಯದಲ್ಲಿ ಪಕ್ಷವು ತನ್ನ ಚುನಾವಣಾ ಪ್ರಾಬಲ್ಯವನ್ನು ಉಳಿಸಿಕೊಂಡಿದೆ ಎಂಬುದನ್ನು ಸೂಚಿಸಿದೆ,
ಒಟ್ಟು 294 ಸದಸ್ಯ ಬಲದ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಬಹುಮತದ ಗಡಿಯಲ್ಲಿ ಸುಲಭವಾಗಿ ದಾಟಲಿದ್ದು, 184 ರಿಂದ 194 ಸ್ಥಾನಗಳನ್ನು ಗೆಲ್ಲಲ್ಲಿದೆ. ಅಂತೆಯೇ, ಬಿಜೆಪಿ 98 ರಿಂದ 108 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಜೊತೆಗೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಈ ಬಾರಿಯೂ ನೆಲೆ ಕಂಡುಕೊಳ್ಳುವ ಸಾಧ್ಯತೆಗಳಿಲ್ಲ ಎಂದು ಸಮೀಕ್ಷೆ ಅಂದಾಜಿಸಿದೆ.
ಮತ ಹಂಚಿಕೆಯ ಅಂತರವು ಟಿಎಂಸಿ ನೆಲೆ ಗಟ್ಟಿಯಾಗಿರುವುದನ್ನು ತೋರುತ್ತದೆ. ಟಿಎಂಸಿ 41.9% ರಷ್ಟು ಮತಗಳನ್ನು ಪಡೆದರೆ, ಬಿಜೆಪಿ 34.9%ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈ ನಿರ್ಣಾಯಕ ಮುನ್ನಡೆಯು ಪ್ರಬಲ ಜನಾದೇಶವಾಗಿ ಬದಲಾಗಬಹುದು ಎಂದು ಸಮೀಕ್ಷೆ ಸೂಚನೆ ನೀಡಿದೆ.
ಪಕ್ಷದ ಜನಪ್ರಿಯತೆಯ ಮುಖವಾಗಿ ಮಮತಾ ಬ್ಯಾನರ್ಜಿ ಮುಂದುವರಿದಿದ್ದಾರೆ. 48.5%ರಷ್ಟು ಮತದಾರರು ಮಮತಾರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಲು ಬಯಸಿದ್ದಾರೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ 33.4%ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಬಲಿಷ್ಠ ಚುನಾವಣಾ ಮುನ್ಸೂಚನೆಯ ನಡುವೆಯೂ, ಸರ್ಕಾರದ ಆಡಳಿತದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳಲ್ಲಿ ಅಸಮಾಧಾನಗಳು ಕಂಡುಬಂದಿದೆ. ಸುಮಾರು 43.3%ರಷ್ಟು ಜನರು ಸರ್ಕಾರದ ಕಾರ್ಯವೈಖರಿಯನ್ನು ‘ಉತ್ತಮ’ ಅಥವಾ ‘ಬಹಳ ಉತ್ತಮ’ ಎಂದಿದ್ದರೂ, 20.6% ಜನರು ‘ಬಹಳ ಕಳಪೆ’ ಮತ್ತು 8.3% ಜನರು ‘ಕಳಪೆ’ ಎಂದಿದ್ದಾರೆ.
ಈ ಚುನಾವಣೆಯಲ್ಲಿ ‘ನಿರುದ್ಯೋಗ’ ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ. 37.2% ಮಂದಿ ನಿರುದ್ಯೋಗವನ್ನು ಗಂಭೀರ ಸಮಸ್ಯೆಯೆಂದು ಉಲ್ಲೇಖಿಸಿದ್ದಾರೆ. ಮಹಿಳಾ ಸುರಕ್ಷತೆ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕುರಿತು 15.9% ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ (ಶೇ. 10.5) ಮತ್ತು ಭ್ರಷ್ಟಾಚಾರ (ಶೇ. 10.3) ನಂತರದ ಸ್ಥಾನಗಳಲ್ಲಿವೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದ ಆತಂಕಗಳು ಕೂಡ ನಿರ್ದಿಷ್ಟ ಗುಂಪುಗಳಲ್ಲಿ ಪ್ರಮುಖವಾಗಿ ಕಂಡುಬಂದಿವೆ.
ಈ ಲೇಖನ ಓದಿದ್ದೀರಾ?: ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?
ಮತ್ತೊಂದೆಡೆ, ಬಿಜೆಪಿ ನಾನಾ ಸವಾಲುಗಳನ್ನು ಎದುರಿಸುತ್ತಿದೆ. ಪಕ್ಷದೊಳಗಿನ ಒಳಜಗಳವು ಬಿಜೆಪಿ ಅಧಿಕಾರದಿಂದ ದೂರವಿರಲು ಕಾರಣವೆಂದು 19.9% ಮಂದಿ ಹೇಳಿದ್ದಾರೆ. ಪ್ರಬಲ ರಾಜ್ಯ ನಾಯಕನ ಕೊರತೆ (17.2%), ಬಂಗಾಳದ ಸಾಂಸ್ಕೃತಿಕ ಪರಂಪರೆಗೆ ಬಿಜೆಪಿ ವಿರುದ್ಧವಿದೆ (12.5%) ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಟ್ಟಾರೆಯಾಗಿ, ಮತದಾರರಲ್ಲಿ ಕೆಲವು ವಿಷಯಗಳ ಕುರಿತು ಕಳವಳಗಳು ಇದ್ದರೂ, ಟಿಎಂಸಿ ಪರವಾದ ಒಲವು ಉಳಿದಿದೆ. ನಾಯಕತ್ವದ ಬಲ ಮತ್ತು ಮತ ಹಂಚಿಕೆಯ ಮುನ್ನಡೆಯು ಮಮತಾ ಬ್ಯಾನರ್ಜಿಯವರಿಗೆ ಸತತ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಖಚಿತಪಡಿಸಬಹುದು ಎಂದು ಸಮೀಕ್ಷೆ ಹೇಳುತ್ತಿದೆ.



